ಮುಂಬೈ: ಅರ್ಜೆಂಟೀನಾದ ಫುಟ್ಬಾಲ್ ದಿಗ್ಗಜ, ಜಾಗತಿಕ ಕ್ರೀಡಾಭಿಮಾನಿಗಳ ಹೃದಯ ಗೆದ್ದಿರುವ ಲಿಯೋನೆಲ್ ಮೆಸ್ಸಿಯ (Lionel Messi) G.O.A.T ಇಂಡಿಯಾ ಪ್ರವಾಸದ ಎರಡನೇ ದಿನ ಭಾನುವಾರ ಮುಂಬೈನಲ್ಲಿ ನಡೆಯಿತು.
ಭಾನುವಾರ ಸಂಜೆ ಐತಿಹಾಸಿಕ ವಾಂಖೇಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗವಹಿಸಿದರು. ಅವರೊಂದಿಗೆ ಉರುಗ್ವೆಯ ಸ್ಟಾರ್ ಆಟಗಾರ ಲೂಯಿಸ್ ಸುವಾರೆಜ್, ರೋಡ್ರಿಗೋ ಡಿ ಪಾಲ್ ಕೂಡ ಹಾಜರಿದ್ದರು. ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳು “ಮೆಸ್ಸಿ… ಮೆಸ್ಸಿ” ಎಂಬ ಘೋಷಣೆಯೊಂದಿಗೆ ಫುಟ್ಬಾಲ್ ದಿಗ್ಗಜನನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಹಾಗೂ ಭಾರತೀಯ ಫುಟ್ಬಾಲ್‌ನ ಶ್ರೇಷ್ಠ ಆಟಗಾರ ಸುನಿಲ್ ಚೆಟ್ರಿ ಮೆಸ್ಸಿಯನ್ನು ಭೇಟಿಯಾದ ಕ್ಷಣ ಎಲ್ಲರ ಗಮನ ಸೆಳೆಯಿತು. ಚೆಟ್ರಿಯನ್ನು ಆತ್ಮೀಯವಾಗಿ ಅಪ್ಪಿಕೊಂಡ ಮೆಸ್ಸಿ, ಅವರೊಂದಿಗೆ ಕೆಲ ಕ್ಷಣ ಮಾತುಕತೆ ನಡೆಸಿದರು. ಬಳಿಕ ತಮ್ಮ ಅರ್ಜೆಂಟೀನಾ ರಾಷ್ಟ್ರೀಯ ತಂಡದ ಜೆರ್ಸಿಯನ್ನು ಚೆಟ್ರಿಗೆ ಉಡುಗೊರೆಯಾಗಿ ನೀಡಿದರು. ಈ ದೃಶ್ಯ ಕ್ರೀಡಾಭಿಮಾನಿಗಳಲ್ಲಿ ಭಾರೀ ಸಂಭ್ರಮ ಮೂಡಿಸಿತ್ತು.
ಇನ್ನೊಂದೆಡೆ, ಕ್ರಿಕೆಟ್ ಮತ್ತು ಫುಟ್ಬಾಲ್ ನಡುವಿನ ಅಪರೂಪದ ಸಂಗಮಕ್ಕೆ ಸಾಕ್ಷಿಯಾದ ಕ್ಷಣವೂ ಈ ಕಾರ್ಯಕ್ರಮದಲ್ಲಿ ನಡೆಯಿತು. ಸಚಿನ್ ತೆಂಡುಲ್ಕರ್ ಅವರು 2011ರ ಏಕದಿನ ವಿಶ್ವಕಪ್‌ನಲ್ಲಿ ತಾವು ಧರಿಸಿದ್ದ ಐತಿಹಾಸಿಕ ಜೆರ್ಸಿಯೊಂದರ ಮೇಲೆ ತಮ್ಮ ಹಸ್ತಾಕ್ಷರ ಹಾಕಿ, ಅದನ್ನು ಮೆಸ್ಸಿಗೆ ಉಡುಗೊರೆಯಾಗಿ ನೀಡಿದರು. 2011ರ ವಿಶ್ವಕಪ್ ಸ್ಮರಣೆಯ ಜೆರ್ಸಿಯನ್ನು ಸ್ವೀಕರಿಸಿದ ಮೆಸ್ಸಿ, ಅದನ್ನು ಗೌರವದಿಂದ ಹಿಡಿದು ಕೃತಜ್ಞತೆ ವ್ಯಕ್ತಪಡಿಸಿದರು. ಪ್ರತಿಯಾಗಿ ಮೆಸ್ಸಿ, 2022ರ ಫಿಫಾ ವಿಶ್ವಕಪ್‌ನಲ್ಲಿ ಬಳಸಲಾಗಿದ್ದ ಫುಟ್ಬಾಲ್ ಒಂದನ್ನು ಸಚಿನ್‌ಗೆ ಗಿಫ್ಟ್ ನೀಡಿದರು. ಈ ಕ್ಷಣ ಕ್ರೀಡಾ ಲೋಕದ ಎರಡು ಮಹಾನ್ ದಿಗ್ಗಜರ ನಡುವಿನ ಪರಸ್ಪರ ಗೌರವದ ಸಂಕೇತವಾಗಿತ್ತು.
ಕಾರ್ಯಕ್ರಮದ ವೇಳೆ ಮಹಾರಾಷ್ಟ್ರ ಸರ್ಕಾರ ರಾಜ್ಯಾದ್ಯಂತ ಫುಟ್ಬಾಲ್ ಪ್ರತಿಭಾನ್ವೇಷಣೆ ಮತ್ತು ಅಭಿವೃದ್ಧಿಗಾಗಿ ಆರಂಭಿಸಿರುವ ‘ಮಹಾದೇವ’ ಯೋಜನೆಗೂ ಅಧಿಕೃತ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮೆಸ್ಸಿ ವೇದಿಕೆ ಹಂಚಿಕೊಂಡು ಈ ಯೋಜನೆಯನ್ನು ಉದ್ಘಾಟಿಸಿದರು.
ಭಾರತೀಯ ಫುಟ್ಬಾಲ್ ತಂಡದ ಆಟಗಾರರಾದ ನಿಖಿಲ್ ಪೂಜಾರಿ, ರಾಹುಲ್ ಭೇಕೆ, ಚಿಂಗ್ಲೆನ್‌ಸಾನಾ ಸಿಂಗ್, ಮಹಿಳಾ ಫುಟ್ಬಾಲ್ ತಾರೆ ಬಾಲಾ ದೇವಿ ಸೇರಿದಂತೆ ಹಲವರು ಮೆಸ್ಸಿಯನ್ನು ಭೇಟಿಯಾಗಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.
ಇಂದು (ಸೋಮವಾರ) ಮೆಸ್ಸಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ರಾಜ್ಯಸಭಾ ಸದಸ್ಯ ಹಾಗೂ ಎಐಎಫ್‌ಎಫ್ ಮಾಜಿ ಅಧ್ಯಕ್ಷ ಪ್ರಫುಲ್ ಪಟೇಲ್ ನಿವಾಸಕ್ಕೆ ತೆರಳಿ, ಅಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಇಡಿ ಮುಖ್ಯಸ್ಥ ರಾಹುಲ್ ನವೀನ್ ಸೇರಿದಂತೆ ಹಲವು ಗಣ್ಯರನ್ನು ಭೇಟಿಯಾಗಲಿದ್ದಾರೆ. ನಂತರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಅಲ್ಲಿ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಕೂಡ ಉಪಸ್ಥಿತರಿರಬಹುದು ಎನ್ನಲಾಗಿದೆ. ಕಾರ್ಯಕ್ರಮಗಳ ನಂತರ ಮೆಸ್ಸಿ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿ ಭಾರತಕ್ಕೆ ವಿದಾಯ ಹೇಳಲಿದ್ದಾರೆ.
