ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ಕಳುಹಿಸಿದ ಲಿಯೋನೆಲ್ ಮೆಸ್ಸಿ

Untitled design 2025 09 18t121251.114

ನವದೆಹಲಿ: ಫುಟ್ಬಾಲ್ ಜಗತ್ತಿನ ದಂತಕಥೆಯಾದ ಲಿಯೋನೆಲ್ ಮೆಸ್ಸಿ ಭಾರತಕ್ಕೆ ತಮ್ಮ ಬಹುನಿರೀಕ್ಷಿತ ಭೇಟಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ, ಅಂದರೆ ಡಿಸೆಂಬರ್ 13ರಿಂದ 15ರವರೆಗೆ ಅವರು ಭಾರತದಲ್ಲಿ ಇರಲಿದ್ದಾರೆ. ಈ ಭೇಟಿಗೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಮೆಸ್ಸಿ ವಿಶೇಷ ಉಡುಗೊರೆಯನ್ನು ಕಳುಹಿಸಿದ್ದಾರೆ. ಅದು ಬೇರೇನೂ ಅಲ್ಲ, 0222ರ ಫಿಫಾ ವಿಶ್ವಕಪ್ ವಿಜಯೋತ್ಸವದಲ್ಲಿ ಧರಿಸಿದ್ದ ಜೆರ್ಸಿಯನ್ನು ಸಹಿ ಮಾಡಿ ಕಳುಹಿಸಿದ್ದಾರೆ.

ಮೆಸ್ಸಿಯ ಭಾರತ ಭೇಟಿಯ ಆಯೋಜಕರಲ್ಲಿ ಒಬ್ಬರಾದ ಸತಾದ್ರು ದತ್ತಾ ಪಿಟಿಐಗೆ ಮಾಹಿತಿ ನೀಡಿದ್ದಾರೆ. “ಫೆಬ್ರವರಿಯಲ್ಲಿ ನಾನು ಮೆಸ್ಸಿಯನ್ನು ಭೇಟಿಯಾಗಿ ಭಾರತ ಭೇಟಿಯ ಬಗ್ಗೆ ಚರ್ಚಿಸಿದ್ದೆ. ಅದೇ ಸಮಯದಲ್ಲಿ ಪ್ರಧಾನಿ ಮೋದಿಯವರ 75ನೇ ಹುಟ್ಟುಹಬ್ಬ ಬರುತ್ತಿದೆ ಎಂದು ಹೇಳಿದ್ದೆ. ಅದಕ್ಕೆ ಮೆಸ್ಸಿ ಸಹಿ ಮಾಡಿದ ಜೆರ್ಸಿಯನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದರು. ಈಗ ಎರಡು ಅಥವಾ ಮೂರು ದಿನಗಳಲ್ಲಿ ಆ ಜೆರ್ಸಿ ಭಾರತಕ್ಕೆ ತಲುಪಲಿದೆ,” ಎಂದು ಅವರು ಹೇಳಿದ್ದಾರೆ. ಈ ಉಡುಗೊರೆ ಕೇವಲ ಒಂದು ಜೆರ್ಸಿ ಮಾತ್ರವಲ್ಲ, ಅದು ಮೆಸ್ಸಿಯ ವಿಶ್ವಕಪ್ ಯಶಸ್ಸಿನ ಸಂಕೇತವಾಗಿದೆ. ಅರ್ಜೆಂಟೀನಾ ತಂಡದ ನಾಯಕನಾಗಿ ಮೆಸ್ಸಿ ನೇತೃತ್ವದಲ್ಲಿ ಗೆದ್ದ ವಿಶ್ವಕಪ್ ಟ್ರೋಫಿ, ಜಗತ್ತಿನಾದ್ಯಂತ ಅಭಿಮಾನಿಗಳನ್ನು ಸೆಳೆದಿದೆ.

ಮೆಸ್ಸಿಯ ಭಾರತ ಭೇಟಿ 2011ರ ನಂತರದ ಮೊದಲನೆಯದು. ಆಗ ಅವರು ಕೋಲ್ಕತಾದಲ್ಲಿ ಫುಟ್ಬಾಲ್ ಪಂದ್ಯದಲ್ಲಿ ಭಾಗಿಯಾಗಿದ್ದರು. ಈಗ ಮತ್ತೆ ಭಾರತಕ್ಕೆ ಬರುತ್ತಿರುವ ಮೆಸ್ಸಿ, ನಾಲ್ಕು ನಗರಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕೋಲ್ಕತಾ, ಅಹಮದಾಬಾದ್, ಮುಂಬೈ ಹಾಗೂ ನವದೆಹಲಿ ನಗರಕ್ಕೆ ಬರಲಿದ್ದಾರೆ. ಈ ಭೇಟಿಯನ್ನು ‘ಗೋಟ್ ಟೂರ್ ಆಫ್ ಇಂಡಿಯಾ 2025’ ಎಂದು ಹೆಸರಿಸಲಾಗಿದೆ. ‘ಗೋಟ್’ ಎಂದರೆ ಗ್ರೇಟೆಸ್ಟ್ ಆಫ್ ಆಲ್ ಟೈಮ್, ಅಂದರೆ ಸಾರ್ವಕಾಲಿಕ ಮಹಾನ್ ಆಟಗಾರ. ಮೆಸ್ಸಿಯನ್ನು ಫುಟ್ಬಾಲ್ ಜಗತ್ತು ಈ ರೂಪದಲ್ಲಿ ಕರೆಯುತ್ತದೆ.

ಮೆಸ್ಸಿಯ ವೇಳಾಪಟ್ಟಿ ಹೀಗಿದೆ.

ಡಿಸೆಂಬರ್ 12ರ ರಾತ್ರಿ ಭಾರತಕ್ಕೆ ಆಗಮಿಸುವ ಅವರು, 13ರಂದು ಕೋಲ್ಕತಾಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಮೆಸ್ಸಿಯ ಪ್ರತಿಮೆ ಹಾಗೂ ಬೃಹತ್ ವರ್ಣಚಿತ್ರವನ್ನು ಅನಾವರಣಗೊಳಿಸಲಾಗುವುದು. ಬಳಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ನಡೆಯಲಿದೆ. ಇದರಲ್ಲಿ ಭಾರತದ ದಿಗ್ಗಜ ಕ್ರೀಡಾಪಟುಗಳಾದ ಸೌರವ್ ಗಂಗೂಲಿ, ಝಹೀರ್ ಖಾನ್, ಬೈಚುಂಗ್ ಭುಟಿಯಾ ಮುಂತಾದವರು ಭಾಗಿಯಾಗಲಿದ್ದಾರೆ. ಸಂಜೆ ಅಹಮದಾಬಾದ್‌ನಲ್ಲಿ ಅದಾನಿ ಫೌಂಡೇಷನ್‌ನ ಕಾರ್ಯಕ್ರಮದಲ್ಲಿ ಮೆಸ್ಸಿ ಭಾಗಿಯಾಗುತ್ತಾರೆ. ಇಲ್ಲಿ ಯುವ ಫುಟ್ಬಾಲ್ ಪ್ರತಿಭೆಗಳೊಂದಿಗೆ ಸಂವಾದ ನಡೆಯಲಿದೆ.

ಡಿಸೆಂಬರ್ 14ರಂದು ಮುಂಬೈಗೆ ತೆರಳುವ ಮೆಸ್ಸಿ, ಬ್ರಬೋರ್ನ್ ಕ್ರೀಡಾಂಗಣದಲ್ಲಿ ‘ಮೀಟ್ ಆಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಭೇಟಿಯಾಗುತ್ತಾರೆ. ಬಳಿಕ ‘ಗೋಟ್ ಕನ್ಸರ್ಟ್’ ನಡೆಯಲಿದೆ, ಅಲ್ಲಿ ಸಂಗೀತ ಹಾಗೂ ಫುಟ್ಬಾಲ್ ಮಿಶ್ರಣದ ಮನರಂಜನೆ ಇರಲಿದೆ. ಸಂಜೆ ವಾಂಖೇಡೆ ಕ್ರೀಡಾಂಗಣದಲ್ಲಿ ‘ಪೆಡಲ್ ಗೋಟ್ ಕಪ್’ ಎಂಬ ವಿಶೇಷ ಪಂದ್ಯ ನಡೆಯಲಿದೆ. ಇದರಲ್ಲಿ ಮೆಸ್ಸಿ ಸೆಲೆಬ್ರಿಟಿಗಳ ಜೊತೆಗೂಡಿ ಆಡಲಿದ್ದಾರೆ. ಭಾರತದ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ರೋಹಿತ್ ಶರ್ಮಾ ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಸೇರಿದಂತೆ ಹಲವು ಪ್ರಸಿದ್ಧ ವ್ಯಕ್ತಿಗಳು ಭಾಗಿಯಾಗುವ ನಿರೀಕ್ಷೆಯಿದೆ.

ಅಂತಿಮ ದಿನವಾದ ಡಿಸೆಂಬರ್ 15ರಂದು ಮೆಸ್ಸಿ ಪ್ರಧಾನಿ ನರೇಂದ್ರ ಮೋದಿಯನ್ನು ಅವರ ನಿವಾಸದಲ್ಲೇ ಭೇಟಿಯಾಗಲಿದ್ದಾರೆ. ಇಬ್ಬರ ನಡುವೆ ಮಾತುಕತೆ ನಡೆಯಲಿದ್ದು, ಔತಣ ಕೂಟದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಬಳಿಕ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಭಾರತದ ಕ್ರಿಕೆಟ್ ಸ್ಟಾರ್‌ಗಳಾದ ವಿರಾಟ್ ಕೊಹ್ಲಿ ಹಾಗೂ ಶುಭ್‌ಮನ್ ಗಿಲ್ ಅವರನ್ನು ಡೆಲ್ಲಿ ಕ್ರಿಕೆಟ್ ಸಂಸ್ಥೆ ಆಹ್ವಾನಿಸಿದೆ ಎಂದು ವರದಿಗಳು ತಿಳಿಸಿವೆ.

Exit mobile version