ರಾಜ್‌ಕೋಟ್: ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಸೋಲನ್ನಪ್ಪಿದೆ. ಡೆರಿಲ್ ಮಿಚೆಲ್ ಅವರ ಸ್ಫೋಟಕ ಶತಕದ ನೆರವಿನಿಂದ ಕಿವೀಸ್ ಪಡೆ 7 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು 1-1 ರಿಂದ ಸಮಬಲ ಸಾಧಿಸಿವೆ. ಸರಣಿಯ ನಿರ್ಣಾಯಕ ಪಂದ್ಯ ಜನವರಿ 18ರಂದು ಇಂದೋರ್‌ನಲ್ಲಿ ನಡೆಯಲಿದೆ.
ಕನ್ನಡಿಗ ಕೆ.ಎಲ್. ರಾಹುಲ್ ಭರ್ಜರಿ ಶತಕ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಅನುಭವಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಲ್ಪ ಮೊತ್ತಕ್ಕೆ ಔಟಾಗಿದರು. ನಾಯಕ ಶುಭಮನ್ ಗಿಲ್ 56 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ, ಒಂದು ಹಂತದಲ್ಲಿ 100 ರನ್‌ಗಳ ಒಳಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್. ರಾಹುಲ್, ಬ್ಯಾಟಿಂಗ್ ಆಡಿ 92 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸಿ ಮಿಂಚಿದರು. ಇದರಿಂದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 284 ರನ್‌ಗಳ ಮೊತ್ತ ಕಲೆಹಾಕಿತು.
285 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಟಗಾರರು ಅಲ್ಪ ಮೊತ್ತಕ್ಕೆ ಔಟಾದಾಗ ಸೋಲಿನ ಭೀತಿ ಎದುರಾಗಿತ್ತು. ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ಡೆರಿಲ್ ಮಿಚೆಲ್ ಮತ್ತು ವಿಲ್ ಯಂಗ್ ಭಾರತದ ಬೌಲರ್‌ಗಳನ್ನು ಸೋಲಿಸಿದರು. ಇವರಿಬ್ಬರು ಸೇರಿ 162 ರನ್‌ಗಳ ಬೃಹತ್ ಜೊತೆಯಾಟವಾಡುವ ಮೂಲಕ ಗೆಲುವಿನ ಹಾದಿಯನ್ನು ಮುಂದುವರೆಸಿದರು.
ಡೆರಿಲ್ ಮಿಚೆಲ್ ಕೇವಲ 117 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 131 ರನ್ ಸಿಡಿಸಿ ಪಂದ್ಯದ ಹೀರೊ ಎನಿಸಿಕೊಂಡರು. ಇವರಿಗೆ ಉತ್ತಮ ಸಾಥ್ ನೀಡಿದ ವಿಲ್ ಯಂಗ್ 87 ರನ್ ಗಳಿಸಿ ಔಟಾದರು. ಅಂತಿಮವಾಗಿ ನ್ಯೂಜಿಲೆಂಡ್ 47.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿ ಗುರಿ ತಲುಪಿತು. ಭಾರತದ ಪರ ಪ್ರಸಿದ್ಧ ಕೃಷ್ಣ, ಹರ್ಷೀತ್ ರಾಣಾ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರಾದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ವಡೋದರದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ಜಯಗಳಿಸಿತ್ತು. ಈಗ ನ್ಯೂಜಿಲೆಂಡ್ ತಿರುಗೇಟು ನೀಡಿರುವುದರಿಂದ ಇಂದೋರ್‌ನಲ್ಲಿ ನಡೆಯಲಿರುವ ಮೂರನೇ ಪಂದ್ಯ ಫೈನಲ್ ರೂಪ ಪಡೆದುಕೊಂಡಿದೆ. ಕೆ.ಎಲ್. ರಾಹುಲ್ ಅವರ ಅದ್ಭುತ ಶತಕ ವ್ಯರ್ಥವಾದದ್ದು ಭಾರತೀಯ ಅಭಿಮಾನಿಗಳಿಗೆ ಬೇಸರ ತರಿಸಿದೆ.





