IPL2025: ರಿಷಬ್ ಪಂತ್‌ರ ಅದ್ಭುತ ಕ್ಯಾಚ್‌ ಹಿಡಿದ ಈಶಾನ್ ಮಲಿಂಗ, ವಿಡಿಯೋ ವೈರಲ್

ಎಸ್‌ಆರ್‌ಹೆಚ್‌ ದಾಳಿಗೆ ಲಕ್ನೋ ಉಡೀಸ್

Befunky collage 2025 05 20t111737.377

ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಾಯಕ ರಿಷಬ್ ಪಂತ್ ಐಪಿಎಲ್ 2025 ರಲ್ಲಿ ತಮ್ಮ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರೆಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 7 ರನ್‌ಗಳಿಗೆ ಔಟಾದರು, ಈಶಾನ್ ಮಲಿಂಗನ ಅಸಾಧಾರಣ ಕ್ಯಾಚ್‌ಗೆ ಬಲಿಯಾದರು.

ಹೌದು ನಿನ್ನೆ ಲಕ್ನೋದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 ರ 61ನೇ ಪಂದ್ಯದಲ್ಲಿ, ಎಲ್‌ಎಸ್‌ಜಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿಯಾದ ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾಕ್ರಮ್ ತಂಡಕ್ಕೆ ಭರ್ಜರಿ ಆರಂಭ ನೀಡಿದರು, ಮೊದಲ ವಿಕೆಟ್‌ಗೆ 115 ರನ್‌ಗಳ ಜೊತೆಯಾಟವಾಡಿದರು. ಆಕ್ರಮಣಕಾರಿ ಬ್ಯಾಟಿಂಗ್‌ನೊಂದಿಗೆ ಎಸ್‌ಆರ್‌ಹೆಚ್ ಬೌಲರ್‌ಗಳನ್ನು ಧೂಳೀಪಟ ಮಾಡಿದರು. ಆದರೆ, 11ನೇ ಓವರ್‌ನಲ್ಲಿ ಮಾರ್ಷ್ ಔಟಾದರು.

ಮೊದಲ ವಿಕೆಟ್ ಬಿದ್ದ ನಂತರ, ರಿಷಬ್ ಪಂತ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಆದರೆ, ಅವರು ಕೇವಲ 6 ಎಸೆತಗಳಲ್ಲಿ 7 ರನ್‌ ಗಳಿಸಿ, ಈಶಾನ್ ಮಲಿಂಗನ ಫುಲ್ ಲೆಂಗ್ಥ್ ಡೆಲಿವರಿಯಲ್ಲಿ ಔಟಾದರು. ಪಂತ್ ಚೆಂಡನ್ನು ಚಿಪ್ ಮಾಡಲು ಯತ್ನಿಸಿದಾಗ, ಮಲಿಂಗ ತಮ್ಮ ಫಾಲೋ-ಥ್ರೂನಲ್ಲಿ ಎತ್ತರಕ್ಕೆ ಜಿಗಿದು ಎರಡೂ ಕೈಗಳಿಂದ ಚೆಂಡನ್ನು ಹಿಡಿದರು. ಕೆಳಗೆ ಬಿದ್ದರೂ ಚೆಂಡನ್ನು ಕೈಬಿಡದೆ ಅದ್ಭುತ ಕ್ಯಾಚ್ ಹಿಡಿದು ಗಮನ ಸೆಳೆದರು.

ಪಂತ್‌ರ ಕಡಿಮೆ ರನ್‌ಗೆ ಔಟಾದ ನಂತರ ಎಲ್‌ಎಸ್‌ಜಿ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ಡ್ರೆಸ್ಸಿಂಗ್ ರೂಮ್‌ಗೆ ಹಿಂತಿರುಗುವಾಗ ಪಂತ್ ನಿರಾಶಿತರಾಗಿ ಕಾಣಿಸಿದರು. ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಕೂಡ ಕ್ಯಾಮೆರಾದಲ್ಲಿ ಸೆರೆಯಾದಂತೆ ನಿರಾಸೆಯಿಂದ ಕಾಣಿಸಿಕೊಂಡರು.

ಪಂದ್ಯದ ಮೊದಲು ಇಎಸ್‌ಪಿಎನ್‌ಕ್ರಿಕ್‌ಇನ್‌ಫೊಗೆ ಮಾತನಾಡಿದ ಟಾಮ್ ಮೂಡಿ, ಎಲ್‌ಎಸ್‌ಜಿ ತಂಡವು ತಮ್ಮ ಪ್ರದರ್ಶನವನ್ನು ಸುಧಾರಿಸಲು ಒಟ್ಟಾಗಿ ಉತ್ತಮ ಪ್ರದರ್ಶನ ನೀಡಬೇಕು ಎಂದು ಹೇಳಿದರು. “ನಿಕೋಲಸ್ ಪೂರನ್ ಫಾರ್ಮ್ ಕಳೆದುಕೊಂಡಿದ್ದಾರೆ, ರಿಷಬ್ ಪಂತ್ ಈ ಸೀಜನ್‌ ಉದ್ದಕ್ಕೂ ಫಾರ್ಮ್‌ನಲ್ಲಿಲ್ಲ, ಮತ್ತು ಮಿಲ್ಲರ್ ಫಿನಿಶಿಂಗ್ ಪಾತ್ರದಲ್ಲಿ ವಿಫಲರಾಗಿದ್ದಾರೆ. ಇದು ಬೌಲಿಂಗ್ ಮೇಲೆ ಒತ್ತಡವನ್ನು ಹೇರುತ್ತದೆ. ಎಲ್‌ಎಸ್‌ಜಿ ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡನ್ನೂ ಸುಧಾರಿಸಿದರೆ ಮಾತ್ರ ಸನ್‌ರೈಸರ್ಸ್ ವಿರುದ್ಧ ಸ್ಪರ್ಧಿಸಬಹುದು,” ಎಂದು ಮೂಡಿ ವಿವರಿಸಿದರು.

Exit mobile version