ಮುಂಬೈ ಇಂಡಿಯನ್ಸ್‌ ನಾಯಕನಾಗಿ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಮತ್ತೆ ಕಮ್‌ಬ್ಯಾಕ್

Untitled design 2026 11 27T185940.270

ಮುಂಬೈ: ಐಪಿಎಲ್ ಇತಿಹಾಸದಲ್ಲಿ ಐದು ಟ್ರೋಫಿಗಳನ್ನು ಗೆದ್ದುಕೊಟ್ಟ ಯಶಸ್ವಿ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ. ಮುಂಬರುವ 2027ರ ಐಪಿಎಲ್ 20ನೇ ಆವೃತ್ತಿಗೆ ರೋಹಿತ್ ಅವರನ್ನು ತಂಡದ ನಾಯಕನನ್ನಾಗಿ ನೇಮಕ ಮಾಡಿರುವುದಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ. ಮೂರು ವರ್ಷಗಳ ಬಳಿಕ ಮತ್ತೆ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವ ರೋಹಿತ್ ಅವರ ಕಮ್‌ಬ್ಯಾಕ್ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮೂಡಿಸಿದೆ.

2024ರಿಂದ 2026ರವರೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಫ್ರಾಂಚೈಸಿ ಟ್ರೇಡ್ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಬಿಟ್ಟುಕೊಟ್ಟಿತ್ತು. ಅವರ ಬದಲಿಗೆ ಪಂಜಾಬ್ ತಂಡದಲ್ಲಿದ್ದ ಭಾರತದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಇದೀಗ ನಾಯಕತ್ವದ ಹೊಣೆಗಾರಿಕೆಯನ್ನು ಮತ್ತೆ ರೋಹಿತ್ ಶರ್ಮಾ ಅವರಿಗೆ ವಹಿಸುವ ಮೂಲಕ ತಂಡ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದೆ.

ಮೂರು ವರ್ಷಗಳ ಬಳಿಕ ನಾಯಕತ್ವಕ್ಕೆ ಮರಳಿದ ರೋಹಿತ್

2024ರ ಐಪಿಎಲ್ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಹಿಂಪಡೆದು ಹಾರ್ದಿಕ್ ಪಾಂಡ್ಯ ಅವರಿಗೆ ವಹಿಸಲಾಗಿತ್ತು. ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ತಂಡ ನಿರೀಕ್ಷಿತ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಮೂರು ಸೀಸನ್‌ಗಳಲ್ಲಿ ತಂಡ ಒಂದೇ ಬಾರಿ ಪ್ಲೇಆಫ್ ತಲುಪಿದ್ದು, 2026ರ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿತ್ತು.

ತಂಡದ ಕಳಪೆ ಪ್ರದರ್ಶನದ ಹಿನ್ನೆಲೆ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಗಳು ನಡೆದಿದ್ದವು. ಇದೀಗ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಬಂದ ಬೆನ್ನಲ್ಲೇ ಮುಂಬೈ ಆಡಳಿತ ಮಂಡಳಿ ಅನುಭವಿ ನಾಯಕ ರೋಹಿತ್ ಅವರ ಮೇಲೆ ಮತ್ತೆ ವಿಶ್ವಾಸವಿಟ್ಟಿದೆ.

ಐದು ಐಪಿಎಲ್ ಟ್ರೋಫಿ ಗೆದ್ದ ನಾಯಕ

ರೋಹಿತ್ ಶರ್ಮಾ 2013ರ ಐಪಿಎಲ್ ಆವೃತ್ತಿಯ ಮಧ್ಯಭಾಗದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಅದೇ ವರ್ಷ ತಂಡಕ್ಕೆ ಚೊಚ್ಚಲ ಐಪಿಎಲ್ ಪ್ರಶಸ್ತಿ ತಂದುಕೊಡುವ ಮೂಲಕ ತಮ್ಮ ನಾಯಕತ್ವದ ಸಾಮರ್ಥ್ಯ ಸಾಬೀತುಪಡಿಸಿದ್ದರು. ಬಳಿಕ 2015, 2017, 2019 ಮತ್ತು 2020ರಲ್ಲಿಯೂ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಒಟ್ಟಾರೆ 2013ರಿಂದ 2023ರವರೆಗೆ ಮುಂಬೈ ತಂಡವನ್ನು ಮುನ್ನಡೆಸಿದ ರೋಹಿತ್, ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರ ಸಾಲಿನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. 

ನಾಯಕತ್ವದ ಬಗ್ಗೆ ರೋಹಿತ್ ಹೇಳಿದ್ದೇನು?

ಮತ್ತೆ ನಾಯಕನಾಗಿ ಆಯ್ಕೆಯಾಗಿರುವ ಕುರಿತು ಮುಂಬೈ ಇಂಡಿಯನ್ಸ್ ಪ್ರಕಟಣೆಯಲ್ಲಿ ಸಂತಸ ಹಂಚಿಕೊಂಡಿರುವ ರೋಹಿತ್ ಶರ್ಮಾ, ಮುಂಬೈ ತಂಡ ತಮ್ಮ ಜೀವನದ ಪ್ರಮುಖ ಭಾಗವಾಗಿದೆ ಎಂದು ಹೇಳಿದ್ದಾರೆ.

“ಮುಂಬೈ ಇಂಡಿಯನ್ಸ್ ನನ್ನ ಜೀವನದ ದೊಡ್ಡ ಭಾಗವಾಗಿದೆ. ಈ ತಂಡವನ್ನು ಮುನ್ನಡೆಸುವುದು ನನಗೆ ಯಾವಾಗಲೂ ಹೆಮ್ಮೆಯ ವಿಷಯ. ಮುಂಬರುವ 20ನೇ ಸೀಸನ್ ಮತ್ತು ಎದುರಾಗಲಿರುವ ಸವಾಲುಗಳನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ನಮ್ಮ ಅಭಿಮಾನಿಗಳಿಗೆ ಸಂಭ್ರಮಿಸಲು ಸಾಕಷ್ಟು ಕ್ಷಣಗಳನ್ನು ನೀಡುವ ಗುರಿ ಹೊಂದಿದ್ದೇವೆ. ನಮ್ಮದೇ ಶೈಲಿಯ ಕ್ರಿಕೆಟ್ ಆಡುವುದು, ಒಟ್ಟಾಗಿ ಸ್ಪರ್ಧಿಸುವುದು ಮತ್ತು ಆಟವನ್ನು ಆನಂದಿಸುವುದರತ್ತ ಗಮನ ಹರಿಸಲಿದ್ದೇವೆ” ಎಂದು ರೋಹಿತ್ ತಿಳಿಸಿದ್ದಾರೆ.

ಮುಂಬೈ ಪಲ್ಟನ್‌ಗೆ ಹೊಸ ಭರವಸೆ

2027ರ ಐಪಿಎಲ್ ಆವೃತ್ತಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಲವು ಬದಲಾವಣೆಗಳಾಗಿವೆ. ಹಾರ್ದಿಕ್ ಪಾಂಡ್ಯ ಅವರ ನಿರ್ಗಮನದೊಂದಿಗೆ ಅರ್ಷದೀಪ್ ಸಿಂಗ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರಂತಹ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ. 

Exit mobile version