IPL 2026: ಇಂದು RCB vs CSK ಹೈವೋಲ್ಟೇಜ್‌ ಸಮರ-ಚಿನ್ನಸ್ವಾಮಿಯಲ್ಲಿ ಪಿಚ್ ರಿಪೋರ್ಟ್ ಹೇಗಿದೆ ?

Untitled design (42)

ಬೆಂಗಳೂರು: ಕ್ರಿಕೆಟ್ ಲೋಕದ ಎರಡು ದೈತ್ಯ ಪಡೆಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಇಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ವಿರುದ್ಧ ಸತತ ಎರಡು ಜಯ ದಾಖಲಿಸಿದ್ದ ಆರ್‌ಸಿಬಿ, ಅದೇ ಲಯವನ್ನು ಮುಂದುವರಿಸುವ ಗುರಿ ಹೊಂದಿದೆ. ಇತ್ತ, ಮೊದಲ ಪಂದ್ಯದಲ್ಲಿ ಸೋತಿದ್ದರೂ ಹಾಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ, ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಚಿನ್ನಸ್ವಾಮಿ ಪಿಚ್ ವರದಿ: ರನ್ ಮಳೆಗೆ ಸಿದ್ಧರಾಗಿ!

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಸದಾ ಬ್ಯಾಟರ್‌ಗಳ ಪಾಲಿನ ಸ್ವರ್ಗ. ಇಲ್ಲಿನ ಪಿಚ್ ಸ್ಥಿರವಾದ ವೇಗ ಮತ್ತು ಬೌನ್ಸ್ ಹೊಂದಿದ್ದು, ವೈಟ್ ಬಾಲ್ ಕ್ರಿಕೆಟ್‌ಗೆ ಹೇಳಿಮಾಡಿಸಿದಂತಿದೆ. ಕ್ರೀಡಾಂಗಣದ ಬೌಂಡರಿಗಳು ಚಿಕ್ಕದಾಗಿರುವುದರಿಂದ ಇಲ್ಲಿ ಸಿಕ್ಸರ್‌ಗಳ ಸುರಿಮಳೆಯಾಗುವುದು ಖಚಿತ.

ಬಲಿಷ್ಠ ಆರ್‌ಸಿಬಿ: ಬ್ಯಾಟಿಂಗ್ ಶಕ್ತಿ

ಪ್ರಸ್ತುತ ಫಾರ್ಮ್ ಗಮನಿಸಿದರೆ ಆರ್‌ಸಿಬಿ ತಂಡವು ಸಿಎಸ್‌ಕೆಗಿಂತ ಹೆಚ್ಚು ಸಮತೋಲಿತವಾಗಿ ಕಾಣುತ್ತಿದೆ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅಬ್ಬರಿಸಿದರೆ ಸ್ಕೋರ್ ಬೋರ್ಡ್ ರಾಕೆಟ್ ವೇಗದಲ್ಲಿ ಚಲಿಸಲಿದೆ. ಬೌಲಿಂಗ್‌ನಲ್ಲಿ ಜೋಶ್ ಹೇಜಲ್‌ವುಡ್ ಅಲಭ್ಯತೆಯ ನಡುವೆಯೂ ಜಾಕೋಬ್ ಡಫಿ ಮತ್ತು ಅನುಭವಿ ಭುವನೇಶ್ವರ್ ಕುಮಾರ್ ತಂಡಕ್ಕೆ ಆಸರೆಯಾಗಿದ್ದಾರೆ. ಯುವ ವೇಗಿ ಮಂಗೇಶ್ ಯಾದವ್ ಅವರಿಗೆ ಇಂದು ಅವಕಾಶ ಸಿಗುವ ಸಾಧ್ಯತೆಯಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸದ್ಯಕ್ಕೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ತಂಡದ ಬೆನ್ನೆಲುಬು ಎಂ.ಎಸ್. ಧೋನಿ ಅವರ ಅಲಭ್ಯತೆ ತಂಡದ ನೈತಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರಿದೆ. ಟ್ರೇಡ್ ಮೂಲಕ ತಂಡಕ್ಕೆ ಬಂದಿರುವ ಸಂಜು ಸ್ಯಾಮ್ಸನ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಾರದಿರುವುದು ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿದೆ. ಆದರೆ, ಯುವ ಪ್ರತಿಭೆ ಆಯುಷ್ ಮ್ಹಾತ್ರೆ ಅವರ ಆಟ ತಂಡಕ್ಕೆ ಭರವಸೆ ಮೂಡಿಸಿದೆ. ಬೌಲಿಂಗ್ ವಿಭಾಗವು ಕಳೆದ ಪಂದ್ಯದಲ್ಲಿ ರನ್ ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಇಂದು ಆರ್‌ಸಿಬಿ ಬ್ಯಾಟರ್‌ಗಳನ್ನು ಹೇಗೆ ಕಟ್ಟಿಹಾಕುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Exit mobile version