ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಮತ್ತೊಂದು ವಿಶ್ವಮಟ್ಟದ ಕ್ರೀಡಾ ಸೌಲಭ್ಯ ಸೇರ್ಪಡೆಯಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರ 4ನೇ ಹಂತದ ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಭವ್ಯ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ನಾಳೆ (ಮೇ 23) ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 943 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಕ್ರೀಡಾಂಗಣ ದೇಶದ ಎರಡನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಶನಿವಾರ ಬೆಳಗ್ಗೆ 11 ಗಂಟೆಗೆ ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಹಾಗೂ ಆನೇಕಲ್ ಶಾಸಕ ಬಿ. ಶಿವಣ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಈ ಯೋಜನೆಯಡಿ ಕೇವಲ ಕ್ರಿಕೆಟ್ ಸ್ಟೇಡಿಯಂ ಮಾತ್ರವಲ್ಲದೆ, ‘ನಮ್ಮ ಮನೆ’ ಯೋಜನೆಗೆ ಚಾಲನೆ, ಸೂರ್ಯ ಶೈನ್ ಮತ್ತು ಸೂರ್ಯ ಡಿವೈನ್ ವಸತಿ ಸಮುಚ್ಛಯಗಳ ಶಂಕುಸ್ಥಾಪನೆ ಹಾಗೂ ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಕಾರ್ಯಕ್ರಮಗಳೂ ನಡೆಯಲಿವೆ.
80 ಸಾವಿರ ಆಸನ ಸಾಮರ್ಥ್ಯ
ನೂತನ ಕ್ರೀಡಾಂಗಣವು ಸುಮಾರು 75 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿದ್ದು, ಒಂದೇ ಸಮಯದಲ್ಲಿ 80 ಸಾವಿರ ಪ್ರೇಕ್ಷಕರು ಪಂದ್ಯ ವೀಕ್ಷಿಸಲು ಸಾಧ್ಯವಾಗಲಿದೆ. ಪ್ರಸ್ತುತ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣವು ಸುಮಾರು 32 ಸಾವಿರ ಆಸನ ಸಾಮರ್ಥ್ಯ ಹೊಂದಿದ್ದು, ಐಪಿಎಲ್ ಮತ್ತು ಅಂತರರಾಷ್ಟ್ರೀಯ ಪಂದ್ಯಗಳ ಸಮಯದಲ್ಲಿ ಅಭಿಮಾನಿಗಳಿಗೆ ಆಸನ ಕೊರತೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಸ್ಟೇಡಿಯಂ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.
ಈ ಕ್ರೀಡಾಂಗಣ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ಎರಡು ಪಟ್ಟು ದೊಡ್ಡದಾಗಿರಲಿದೆ. ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳಲಿರುವ ಈ ಸ್ಟೇಡಿಯಂನಲ್ಲಿ ಆಧುನಿಕ ಹಾಸ್ಪಿಟಾಲಿಟಿ ಲೌಂಜ್‌ಗಳು, ವಿಐಪಿ ಬಾಕ್ಸ್‌ಗಳು, ಮೀಡಿಯಾ ಗ್ಯಾಲರಿ ಹಾಗೂ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಗಳು ಇರಲಿವೆ.
ಮೆಟ್ರೋ ಸಂಪರ್ಕದೊಂದಿಗೆ ಸುಲಭ ಪ್ರವೇಶ
ಸ್ಟೇಡಿಯಂಗೆ ಸುಲಭ ಸಂಪರ್ಕ ಕಲ್ಪಿಸಲು ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ ಸುಮಾರು 18.4 ಕಿ.ಮೀ ದೂರದಲ್ಲಿರುವ ಈ ಸ್ಥಳಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸುವ ಯೋಜನೆಯಿದೆ.
ಇದೇ ವೇಳೆ ಕೆಂಪೇಗೌಡ ಬಸ್ ನಿಲ್ದಾಣದಿಂದ 47.9 ಕಿ.ಮೀ., ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 72.2 ಕಿ.ಮೀ., ಹಾಗೂ ಆನೇಕಲ್ ರೈಲು ನಿಲ್ದಾಣದಿಂದ 11.2 ಕಿ.ಮೀ ದೂರದಲ್ಲಿರುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಸುಲಭವಾಗಿ ತಲುಪಬಹುದಾಗಿದೆ.
ಎರಡು ಹಂತಗಳಲ್ಲಿ ನಿರ್ಮಾಣ
ಮೊದಲ ಹಂತದಲ್ಲಿ ಸ್ಟೇಡಿಯಂ, ರಸ್ತೆ, ವಿದ್ಯುತ್ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ 943 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಬಳಿಕ ಎರಡನೇ ಹಂತದಲ್ಲಿ ಸಮಗ್ರ ಕ್ರೀಡಾ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಇದರಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಪ್ರತ್ಯೇಕ ಸೌಲಭ್ಯ, ಸಮಾವೇಶ ಕೇಂದ್ರ, ಸುಸಜ್ಜಿತ ಹೋಟೆಲ್ ಸೇರಿದಂತೆ ಅನೇಕ ವ್ಯವಸ್ಥೆಗಳು ಇರಲಿವೆ.
ಈ ಕ್ರೀಡಾಂಗಣವು ಕೇವಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಮಾತ್ರ ಸೀಮಿತವಾಗದೇ, ಕರ್ನಾಟಕದ ಕ್ರೀಡಾಭಿವೃದ್ಧಿಗೂ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಯುವಕರಿಗಾಗಿ ಕ್ರಿಕೆಟ್ ತರಬೇತಿ ಕೇಂದ್ರಗಳು, ಶಾಲೆ-ಕಾಲೇಜು ಮಟ್ಟದ ಕ್ರೀಡಾಕೂಟಗಳು ಹಾಗೂ ರಾಜ್ಯ ಮಟ್ಟದ ಟೂರ್ನಿಗಳ ಆಯೋಜನೆಗೆ ಇದು ಪ್ರಮುಖ ವೇದಿಕೆಯಾಗಲಿದೆ.
