ಬೆಂಗಳೂರು (ಜುಲೈ 13): ಜಗತ್ಪ್ರಸಿದ್ದ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ನಡೆಯುವ ಮೊದಲ ಆರತಿ (First Aarti)ಯಲ್ಲಿ ಇನ್ನು ಮುಂದೆ ಕರ್ನಾಟಕದ ಸಚಿವರು, ಶಾಸಕರು, ಸಂಸದರು, ನ್ಯಾಯಾಧೀಶರು ಹಾಗೂ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸೇರಿದಂತೆ ರಾಜ್ಯದ ಗಣ್ಯರು ಶಿಷ್ಟಾಚಾರದ (Protocol) ಅನ್ವಯ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಬನಶಂಕರಿಯ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, ಈ ಕುರಿತು ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಪ್ರೋಟೋಕಾಲ್ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು. ಈ ಕ್ರಮದ ಮೂಲಕ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವ ಗಣ್ಯರಿಗೆ ತಿರುಮಲದಲ್ಲಿ ಮೊದಲ ಆರತಿ ವೀಕ್ಷಿಸುವ ಹಾಗೂ ವಿಶೇಷ ದರ್ಶನ ಪಡೆಯುವ ಅವಕಾಶ ದೊರೆಯಲಿದೆ.
ತಿರುಮಲ ದೇವಸ್ಥಾನದಲ್ಲಿ ಕರ್ನಾಟಕದ ಪರವಾಗಿ ಮೊದಲ ಆರತಿ ಸಲ್ಲಿಸುವ ಸಂಪ್ರದಾಯಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಅರಸರು ಹಾಗೂ ನಂತರ ಮೈಸೂರು ಒಡೆಯರ್ ರಾಜವಂಶದವರು ಶ್ರೀ ವೆಂಕಟೇಶ್ವರ ಸ್ವಾಮಿಗೆ ಚಿನ್ನಾಭರಣ, ಭೂಮಿ ಮತ್ತು ನಿತ್ಯ ಪೂಜಾ ಕೈಂಕರ್ಯಗಳಿಗೆ ಅಗತ್ಯವಾದ ದೇಣಿಗೆಗಳನ್ನು ನೀಡಿದ್ದರು. ಮೈಸೂರು ಸಂಸ್ಥಾನ ದೇವಸ್ಥಾನದ ದೈನಂದಿನ ಪೂಜಾ ವೆಚ್ಚವನ್ನು ಭರಿಸುತ್ತಿದ್ದ ಕಾರಣ, ಮೊದಲ ಆರತಿಯನ್ನು ಸ್ವೀಕರಿಸುವ ಗೌರವ ಮೈಸೂರು ರಾಜವಂಶಕ್ಕೆ ದೊರಕಿತ್ತು.
ಸ್ವಾತಂತ್ರ್ಯಾ ನಂತರ ಈ ಸಂಪ್ರದಾಯವನ್ನು ಕರ್ನಾಟಕ ಸರ್ಕಾರ ಮುಂದುವರಿಸಿಕೊಂಡು ಬಂದಿದೆ. ಶಿಷ್ಟಾಚಾರದ ಪ್ರಕಾರ ಪ್ರತಿದಿನ ಮುಂಜಾನೆ ಗರ್ಭಗುಡಿಯ ಮುಂಭಾಗದ ಕುಲಶೇಖರ ಪಡಿಯಲ್ಲಿ ನಿಂತು ಇಡೀ ಕರ್ನಾಟಕದ ಪರವಾಗಿ ಮೊದಲ ಆರತಿ ಹಾಗೂ ಪ್ರಸಾದವನ್ನು ಮುಖ್ಯಮಂತ್ರಿ ಸ್ವೀಕರಿಸುವ ವ್ಯವಸ್ಥೆ ಜಾರಿಯಲ್ಲಿದೆ. ಮುಖ್ಯಮಂತ್ರಿಗಳು ಗೈರಾಗಿದ್ದರೆ ಸರ್ಕಾರ ನೇಮಿಸಿದ ವಿಶೇಷ ಅಧಿಕಾರಿಯೊಬ್ಬರು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ಹೊಸ ನಿರ್ಧಾರದ ಮೂಲಕ ಕರ್ನಾಟಕ ಸರ್ಕಾರವನ್ನು ಅಧಿಕೃತವಾಗಿ ಪ್ರತಿನಿಧಿಸಿ ತಿರುಮಲಕ್ಕೆ ಭೇಟಿ ನೀಡುವ ಸಚಿವರು, ಶಾಸಕರು, ಸಂಸದರು, ನ್ಯಾಯಾಧೀಶರು ಹಾಗೂ ಹಿರಿಯ ಅಧಿಕಾರಿಗಳಿಗೂ ಇದೇ ಗೌರವ ಸಿಗಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಆದೇಶಗಳನ್ನು ಹೊರಡಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, “ಕರ್ನಾಟಕದ ಅನೇಕ ಜನಪ್ರತಿನಿಧಿಗಳು ತಿರುಪತಿಗೆ ತೆರಳಿದಾಗ ಸೂಕ್ತ ದರ್ಶನ ಸಿಗದೆ ಹಿಂದಿರುಗಿದ ಉದಾಹರಣೆಗಳಿವೆ. ಇನ್ನು ಮುಂದೆ ರಾಜ್ಯದ ಪರವಾಗಿ ಸೇವೆ ಸಲ್ಲಿಸುವ ಎಲ್ಲ ಗಣ್ಯರಿಗೂ ತಿಮ್ಮಪ್ಪನ ಸನ್ನಿಧಿಯಲ್ಲಿ ಮೊದಲ ಆರತಿ ವೀಕ್ಷಿಸುವ ಸೌಭಾಗ್ಯ ಸಿಗಲಿದೆ. ಇದು ನನ್ನ ಮುಖ್ಯಮಂತ್ರಿ ಅವಧಿಯ ಅತ್ಯಂತ ಮಹತ್ವದ ಘೋಷಣೆ” ಎಂದು ಹೇಳಿದರು.
ತಮ್ಮ ವೈಯಕ್ತಿಕ ಅನುಭವವನ್ನೂ ಹಂಚಿಕೊಂಡ ಅವರು, ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ತಮ್ಮ ಮನೆದೇವರಾಗಿದ್ದು, ಇತ್ತೀಚಿನ ತಿರುಮಲ ಭೇಟಿಯ ವೇಳೆ ಈ ನಿರ್ಧಾರ ಕೈಗೊಳ್ಳುವ ಆಲೋಚನೆ ಮೂಡಿತು ಎಂದರು. ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ತಿರುಪತಿಯಲ್ಲಿ ಕರ್ನಾಟಕ ಟ್ರಸ್ಟ್‌ನ ಜವಾಬ್ದಾರಿ ತಮ್ಮಗೆ ನೀಡಲಾಗಿತ್ತು. ಆದರೆ ಸರ್ಕಾರದ ಅವಧಿ ಮುಗಿದ ಕಾರಣ ಆ ಯೋಜನೆ ಪೂರ್ಣಗೊಳ್ಳಲಿಲ್ಲ. ಇದೀಗ ಆ ಕನಸು ನನಸಾಗುತ್ತಿದೆ ಎಂದು ಮುಖ್ಯಮಂತ್ರಿ ಶಿವಕುಮಾರ್ ತಿಳಿಸಿದ್ದಾರೆ.
