ಗುವಾಹಟಿ: ಐಪಿಎಲ್ 2026ರ ಸೀಸನ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ರಾಜಸ್ಥಾನ್, ಸಿಎಸ್‌ಕೆ ತಂಡವನ್ನು ಅಕ್ಷರಶಃ ಕಂಗೆಡಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಮೊದಲು ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ ತಲಾ 6 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿದರು. ಬೆನ್ನಲ್ಲೇ ಆಯುಷ್ ಮ್ಹಾತ್ರೆ ಶೂನ್ಯಕ್ಕೆ ಔಟಾದರೆ, ಮ್ಯಾಟ್ ಶಾರ್ಟ್ ಕೇವಲ 2 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
ಕೇವಲ 38 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಜೆಮಿ ಓವರ್ಟನ್ ಆಸರೆಯಾದರು. ಓವರ್ಟನ್ 36 ಎಸೆತಗಳಲ್ಲಿ 43 ರನ್ ಗಳಿಸಿದರು. ಕಾರ್ತಿಕ್ ಶರ್ಮಾ (18) ಮತ್ತು ಸರ್ಫರಾಜ್ ಖಾನ್ (17) ಅವರ ಸಾಧಾರಣ ಹೋರಾಟದ ಹೊರತಾಗಿಯೂ ಸಿಎಸ್‌ಕೆ 19.4 ಓವರ್‌ಗಳಲ್ಲಿ 127 ರನ್‌ಗಳಿಗೆ ಆಲ್‌ಔಟ್ ಆಯಿತು. ರಾಜಸ್ಥಾನ್ ಪರ ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದು ಮಿಂಚಿದರು.
ವೈಭವ್ ಸೂರ್ಯವಂಶಿ ದಾಖಲೆಯ ಅರ್ಧಶತಕ
128 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್‌ಗೆ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರು. ಕೇವಲ 17 ಎಸೆತಗಳನ್ನು ಎದುರಿಸಿದ ವೈಭವ್ 4 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 52 ರನ್ ಚಚ್ಚಿದರು. ಅವರ ಈ ಅಬ್ಬರದ ಆಟದಿಂದಾಗಿ ರಾಜಸ್ಥಾನ್ ತಂಡವು ಕೇವಲ ಪವರ್‌ಪ್ಲೇ ಅವಧಿಯಲ್ಲೇ ಗೆಲುವಿನ ಹಾದಿಯನ್ನು ಸುಗಮಗೊಳಿಸಿಕೊಂಡಿತು.
ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ ಅಜೇಯ 38 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಧ್ರುವ್ ಜುರೆಲ್ (18) ಮತ್ತು ನಾಯಕ ರಿಯಾನ್ ಪರಾಗ್ (ಅಜೇಯ 14) ಅವರ ಕೊಡುಗೆಯಿಂದ ರಾಜಸ್ಥಾನ್ ತಂಡವು ಕೇವಲ 12.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿ ಸುಲಭ ಜಯ ದಾಖಲಿಸಿತು.





