ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಇತ್ತೀಚೆಗೆ ಉಂಟಾಗಿರುವ ಒತ್ತಡದ ಹಿನ್ನೆಲೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಗೆ ಮುನ್ನ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಚನೆ ನೀಡಿದೆ.
ಈ ಸೂಚನೆ ಕ್ರೀಡಾ ವಲಯದಲ್ಲಿ ಮಾತ್ರವಲ್ಲದೆ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿಯೂ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ ತಿಂಗಳು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರ ಸೇವೆಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ ಕೆಕೆಆರ್ ತಂಡವು 2 ಕೋಟಿ ರೂ. ಬೆಲೆಯಿದ್ದ ಮುಸ್ತಾಫಿಜುರ್ ಅವರನ್ನು 9.20 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು.
ಆದರೆ ಇದೀಗ ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರದಿಂದಾಗಿ, ಕೆಕೆಆರ್ ತಂಡವು ಆ ಆಟಗಾರನನ್ನು ಕೈಬಿಡಬೇಕಾದ ಅನಿವಾರ್ಯಕ್ಕೆ ಸಿಲುಕಿದೆ. ಈ ಕುರಿತು ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ,
“ಬಿಸಿಸಿಐ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಕೇಳಿದೆ. ಅಗತ್ಯವಿದ್ದರೆ, ಕೆಕೆಆರ್ ಬದಲಿ ಆಟಗಾರನನ್ನು ಸೂಚಿಸಬಹುದು. ವಿನಂತಿಯ ಮೇರೆಗೆ, ಬಿಸಿಸಿಐ ಬದಲಿ ಆಟಗಾರನಿಗೆ ಅನುಮತಿ ನೀಡಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರಕ್ಕೆ ಕಾರಣವೇನು ಎಂಬುದಕ್ಕೆ ಉತ್ತರಿಸಿದ ಅವರು, “ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಒಬ್ಬ ಹಿಂದೂ ವ್ಯಕ್ತಿಯ ಹತ್ಯೆ ನಡೆದಿರುವುದು ಹಾಗೂ ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಭದ್ರತೆ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಆಟಗಾರರ ಐಪಿಎಲ್ ಭಾಗವಹಿಸುವಿಕೆ ಕುರಿತು ಬಿಸಿಸಿಐ ಮೇಲೆ ಸಾರ್ವಜನಿಕ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಡ ಹೆಚ್ಚಾಗಿತ್ತು.
“ಬಾಂಗ್ಲಾದೇಶ ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂಬ ಕೂಗು ಕೂಡ ಜೋರಾಗಿತ್ತು. ಇದರ ಪರಿಣಾಮವಾಗಿ, ಐಪಿಎಲ್ನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಬಾಂಗ್ಲಾದೇಶದ ಆಟಗಾರರಿಗೆ ಅವಕಾಶ ನೀಡಬಾರದು ಎಂಬ ಜನಾಗ್ರಹವೂ ಹೆಚ್ಚಾಗಿತ್ತು ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಬಾಲಿವುಡ್ ನಟ ಶಾರೂಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಸಿಸಿಐ ನೀಡಿದ ಈ ಖಡಕ್ ಸೂಚನೆ ಮಹತ್ವ ಪಡೆದುಕೊಂಡಿದೆ. ಮುಸ್ತಾಫಿಜುರ್ ರೆಹಮಾನ್ ಒಬ್ಬ ಅನುಭವೀ ಎಡಗೈ ವೇಗಿ ಆಗಿದ್ದು, ಡೆತ್ ಓವರ್ಗಳಲ್ಲಿ ಅವರ ಬೌಲಿಂಗ್ ಕೆಕೆಆರ್ ತಂಡಕ್ಕೆ ದೊಡ್ಡ ಬಲವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ರಾಜಕೀಯ ಒತ್ತಡಗಳ ನಡುವೆಯೇ ಕ್ರೀಡೆಯ ಮೇಲೆ ಪರಿಣಾಮ ಬೀರುವಂತಾಗಿದೆ.
