ಐಪಿಎಲ್ 2026ರ 35ನೇ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದಲ್ಲಿ ಆತಂಕದ ಛಾಯೆ ಆವರಿಸಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ತರಬೇತಿ ಅವಧಿಯಲ್ಲಿ ತಂಡದ ಭರವಸೆಯ ಯುವ ಬ್ಯಾಟರ್ ಸಾಹಿಲ್ ಪರಾಖ್ ಅವರ ಮುಖಕ್ಕೆ ಬಲವಾಗಿ ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ಸಂಜೆ ನಡೆದ ಅಭ್ಯಾಸದ ವೇಳೆ 18 ವರ್ಷದ ಸಾಹಿಲ್ ಪರಾಖ್ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ವೇಗದ ಬೌಲರ್ ಎಸೆದ ಬೌನ್ಸರ್ ಅನ್ನು ಎದುರಿಸುವಲ್ಲಿ ಅವರು ವಿಫಲರಾದರು. ಚೆಂಡು ನೇರವಾಗಿ ಹೆಲ್ಮೆಟ್‌ನ ಗ್ರಿಲ್ ನಡುವಿನಿಂದ ನುಗ್ಗಿ ಅವರ ಮುಖಕ್ಕೆ ಬಲವಾಗಿ ಬಡಿದಿದೆ. ಏಟಿನ ತೀವ್ರತೆಗೆ ಸಾಹಿಲ್ ಮೈದಾನದಲ್ಲೇ ಕುಸಿದು ಬಿದ್ದರು. ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದರೂ, ರಕ್ತಸ್ರಾವ ನಿಲ್ಲದ ಕಾರಣ ಅವರನ್ನು ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾರು ಈ ಸಾಹಿಲ್ ಪರಾಖ್?
ಮಹಾರಾಷ್ಟ್ರದ ನಾಸಿಕ್ ಮೂಲದ ಸಾಹಿಲ್ ಪರಾಖ್ ಪ್ರತಿಭಾವಂತ ಎಡಗೈ ಬ್ಯಾಟರ್. ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ರನ್ ಗಳಿಸಿದ್ದ ಇವರನ್ನು ಈ ಬಾರಿಯ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ₹30 ಲಕ್ಷ ನೀಡಿ ಖರೀದಿಸಿತ್ತು. ಸದ್ಯ ಅವರ ಮುಖದ ಮೂಳೆ ಮುರಿತವಾಗಿದೆಯೇ ಎಂದು ಪರೀಕ್ಷಿಸಲು ಸ್ಕ್ಯಾನಿಂಗ್ ನಡೆಸಲಾಗುತ್ತಿದ್ದು, ಅಭಿಮಾನಿಗಳು ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಡೆಲ್ಲಿ ವರ್ಸಸ್ ಪಂಜಾಬ್ ಮುಖಾಮುಖಿ :
ಇಂದು ಮಧ್ಯಾಹ್ನ 3.30ಕ್ಕೆ ದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್ ವಿರುದ್ಧ ಗೆದ್ದು ಟಾಪ್-4 ಸ್ಥಾನಕ್ಕೇರುವ ಗುರಿಯನ್ನು ಡೆಲ್ಲಿ ಹೊಂದಿದೆ. ಆದರೆ ಪಂದ್ಯಕ್ಕೂ ಮುನ್ನವೇ ಯುವ ಆಟಗಾರ ಗಾಯಗೊಂಡಿರುವುದು ತಂಡದ ಆತ್ಮವಿಶ್ವಾಸಕ್ಕೆ ಸ್ವಲ್ಪ ಹೊಡೆತ ನೀಡಿದೆ.
