IPL 2026: ಪ್ಲೇಆಫ್ ತಲುಪಲು ಆರ್‌ಸಿಬಿಗೆ ಬೇಕಿದೆ ಕೇವಲ 3 ಗೆಲುವು

BeFunky collage (38)

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಗಾಲೋಟ ಮುಂದುವರಿದಿದೆ. ಲೀಗ್‌ನ ಮೊದಲಾರ್ಧ ಮುಕ್ತಾಯವಾಗುವ ಹಂತಕ್ಕೆ ಬಂದಿದ್ದು, ಆರ್‌ಸಿಬಿ ಪ್ಲೇಆಫ್ ಹಾದಿ ಈಗ ಅತ್ಯಂತ ಸುಗಮವಾಗಿ ಕಾಣುತ್ತಿದೆ. ಈ ಬಾರಿ ಪ್ಲೇಆಫ್ ಹಂತಕ್ಕೇರಲು ವಿರಾಟ್ ಕೊಹ್ಲಿ ಪಡೆಗೆ ಕೇವಲ ಮೂರು ಪಂದ್ಯಗಳ ಗೆಲುವಿನ ಅವಶ್ಯಕತೆಯಿದೆ.

ಪ್ಲೇಆಫ್ ಲೆಕ್ಕಾಚಾರ ಹೇಗಿದೆ? ಐಪಿಎಲ್ ಇತಿಹಾಸದ ಪ್ರಕಾರ, ಲೀಗ್ ಹಂತದಲ್ಲಿ ಒಂದು ತಂಡವು ಕನಿಷ್ಠ 8 ಪಂದ್ಯಗಳನ್ನು ಗೆದ್ದರೆ (16 ಅಂಕಗಳು), ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರ ಸ್ಥಾನ ಖಚಿತವಾಗುತ್ತದೆ. ಸದ್ಯ ಆರ್‌ಸಿಬಿ ಆಡಿರುವ ಏಳು ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ ಒಟ್ಟು 10 ಅಂಕಗಳನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಲೀಗ್ ಹಂತದಲ್ಲಿ ಇನ್ನುಳಿದ ಪಂದ್ಯಗಳಲ್ಲಿ ಮೂರರಲ್ಲಿ ಜಯಿಸಿದರೆ ಬೆಂಗಳೂರು ತಂಡ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಲಿದೆ.

ಮೊದಲಾರ್ಧದಲ್ಲಿ ಆರ್‌ಸಿಬಿ ಪ್ರದರ್ಶನ: ಈ ಬಾರಿ ಆರ್‌ಸಿಬಿ ತನ್ನ ಅಭಿಯಾನವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಅಮೋಘ ಗೆಲುವಿನೊಂದಿಗೆ ಆರಂಭಿಸಿತು. ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿ ಅಬ್ಬರಿಸಿತ್ತು. ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಂಡರೂ, ತಕ್ಷಣವೇ ಕಂಬ್ಯಾಕ್ ಮಾಡಿದ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳನ್ನು ಬಗ್ಗುಬಡಿಯಿತು. ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿದರೂ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ.

ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಹಾದಿಯಲ್ಲಿರುವ ಆರ್‌ಸಿಬಿ, ಮುಂದಿನ ಪಂದ್ಯಗಳಲ್ಲಿ ಇದೇ ಫಾರ್ಮ್ ಮುಂದುವರಿಸಿದರೆ ಸುಲಭವಾಗಿ ಪ್ಲೇಆಫ್ ಟಿಕೆಟ್ ಪಡೆಯುವುದರಲ್ಲಿ ಸಂಶಯವಿಲ್ಲ.

Exit mobile version