IPL 2025: ಐಪಿಎಲ್ ಮತ್ತೆ ಆರಂಭಿಸಲು ಡೇಟ್ ಫಿಕ್ಸ್

Web 2025 05 11t084357.863

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಸೀಸನ್-18ರ 57 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇನ್ನುಳಿದಿರುವ 13 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳೊಂದಿಗೆ ಈ ಬಾರಿಯ ಟೂರ್ನಿ ಪೂರ್ಣಗೊಳ್ಳಲಿದೆ. ಬಿಸಿಸಿಐ ಮೂಲಗಳ ಪ್ರಕಾರ, ಟೂರ್ನಿಯನ್ನು ಮೇ 15 ಅಥವಾ 16 ರಂದು ಪುನರಾರಂಭಿಸಲು ನಿರ್ಧರಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ಧರ್ಮಶಾಲಾ ಪಂದ್ಯ ಸ್ಥಳಾಂತರ

ಐಪಿಎಲ್ ಪಂದ್ಯಗಳನ್ನು ಭಾರತದಲ್ಲೇ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆದರೆ, ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ದಕ್ಷಿಣ ಭಾರತದಲ್ಲಿ ಆಯೋಜಿಸುವ ಸಾಧ್ಯತೆಯಿದೆ. ಉಳಿದಂತೆ ಆಯಾ ತಂಡಗಳ ಹೋಮ್ ಗ್ರೌಂಡ್‌ನಲ್ಲೇ ಲೀಗ್ ಮತ್ತು ಪ್ಲೇಆಫ್ ಪಂದ್ಯಗಳು ನಡೆಯಲಿವೆ.

17 ಪಂದ್ಯಗಳ ಯೋಜನೆ

ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಮರು ನಿಗದಿಪಡಿಸುವ ಮೂಲಕ ಮೇ ತಿಂಗಳಲ್ಲಿ ಒಟ್ಟು 17 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಇದರಲ್ಲಿ 13 ಲೀಗ್ ಪಂದ್ಯಗಳು ಮತ್ತು 4 ಪ್ಲೇಆಫ್ ಪಂದ್ಯಗಳು ಸೇರಿವೆ. ಈ ಪಂದ್ಯಗಳ ಮೂಲಕ ಸೀಸನ್-18ರ ಚಾಂಪಿಯನ್ ತಂಡ ಯಾವುದು ಎಂಬುದು ನಿರ್ಧಾರವಾಗಲಿದೆ.

ವಿದೇಶಿ ಆಟಗಾರರಿಗೆ ಸೂಚನೆ

ಭಾರತದಿಂದ ತವರಿಗೆ ಮರಳಿರುವ ವಿದೇಶಿ ಆಟಗಾರರಿಗೆ ಒಂದು ವಾರದೊಳಗೆ ಸಿದ್ಧರಾಗಿರುವಂತೆ ಫ್ರಾಂಚೈಸಿಗಳು ಸೂಚನೆ ನೀಡಿವೆ. ಬಹುತೇಕ ವಿದೇಶಿ ಆಟಗಾರರು ಈ ವಾರದಲ್ಲಿ ಭಾರತಕ್ಕೆ ಮರಳಲಿದ್ದಾರೆ. ಅಲ್ಲದೆ, ಆಯಾ ಕ್ರಿಕೆಟ್ ಮಂಡಳಿಗಳ ಜೊತೆ ಚರ್ಚಿಸಿ ಆಟಗಾರರನ್ನು ಕಳುಹಿಸಿಕೊಡಲು ಬಿಸಿಸಿಐ ಮುಂದಾಗಿದೆ.

ಕೇಂದ್ರ ಸರ್ಕಾರದ ಅನುಮತಿ

ಐಪಿಎಲ್ ಪುನರಾರಂಭಕ್ಕೆ ದಿನಾಂಕ ನಿಗದಿಯಾದರೂ, ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಭಾರತ-ಪಾಕಿಸ್ತಾನ ಕದನ ವಿರಾಮದಿಂದಾಗಿ ಧರ್ಮಶಾಲಾವನ್ನು ಹೊರತುಪಡಿಸಿ ಉಳಿದೆಡೆ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಕೇಂದ್ರದ ಒಪ್ಪಿಗೆಗಾಗಿ ಕಾಯುತ್ತಿದೆ. ಗುರುವಾರ ಅಥವಾ ಶುಕ್ರವಾರದಿಂದ ಟೂರ್ನಿ ಪುನರಾರಂಭವಾಗುವುದು ಬಹುತೇಕ ಖಚಿತವಾಗಿದೆ.

Exit mobile version