ಟಿ20 ವಿಶ್ವಕಪ್ ಫೈನಲ್: ಸಂಜು, ಅಭಿಷೇಕ್, ಇಶಾನ್ ಅಬ್ಬರ-ನ್ಯೂಜಿಲೆಂಡ್‌ಗೆ 256 ರನ್‌ಗಳ ಬೃಹತ್ ಗುರಿ

Untitled design 2026 03 08T213559.869

ಅಹಮದಾಬಾದ್: ಐಸಿಸಿ ಟಿ20 ವಿಶ್ವಕಪ್ 2026ರ ಮಹಾಫೈನಲ್‌ನಲ್ಲಿ ಟೀಮ್ ಇಂಡಿಯಾ ರನ್ ಶಿಖರ ನಿರ್ಮಿಸಿದೆ. ಆರಂಭಿಕ ಬ್ಯಾಟರ್‌ಗಳ ಸ್ಫೋಟಕ ಆಟದ ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ ಕಲೆಹಾಕಿದೆ. ಈ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ವಿಶ್ವಕಪ್ ಗೆಲ್ಲಲು 256 ರನ್‌ಗಳ ಗುರಿಯನ್ನು ನೀಡಿದೆ.

ಆರಂಭದಲ್ಲೇ ಸಿಡಿದ ಅಭಿಷೇಕ್-ಸಂಜು ಜೋಡಿ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಆರಂಭದಲ್ಲಿ ರನ್ ಬರಲು ನಾಲ್ಕು ಎಸೆತಗಳು ಬೇಕಾಯಿತು. ಆದರೆ ಸಂಜು ಸ್ಯಾಮ್ಸನ್ ಸಿಡಿಸಿದ ಮೊದಲ ಸಿಕ್ಸರ್ ಪಂದ್ಯದ ಚಿತ್ರಣವನ್ನೇ ಬದಲಿಸಿತು. ಟೀಕೆಗಳಿಗೆ ಗುರಿಯಾಗಿದ್ದ ಯುವ ಆಟಗಾರ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಅವರು 52 ರನ್ ಗಳಿಸಿ ಔಟಾದಾಗ ಭಾರತದ ಸ್ಕೋರ್ ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿತ್ತು.

ಸಂಜು ಸ್ಯಾಮ್ಸನ್ ಸಿಕ್ಸರ್ ಸುರಿಮಳೆ

ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ ಜೊತೆಗೂಡಿದ ಸಂಜು ಸ್ಯಾಮ್ಸನ್, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಸಂಜು ಕೇವಲ 46 ಎಸೆತಗಳಲ್ಲಿ 89 ರನ್ (ಸಿಕ್ಸರ್‌ಗಳ ಅಬ್ಬರದೊಂದಿಗೆ) ಸಿಡಿಸಿ ಔಟಾದರು. ದುರದೃಷ್ಟವಶಾತ್ ಸೆಮಿಫೈನಲ್‌ನಂತೆ ಇಲ್ಲೂ ಶತಕ ವಂಚಿತರಾದರು. ಆದರೆ, ವಿಶ್ವಕಪ್‌ನ ನಾಕೌಟ್ ಪಂದ್ಯಗಳಲ್ಲಿ ಸತತ ಅರ್ಧಶತಕ ಬಾರಿಸಿದ ದಿಗ್ಗಜರ ಸಾಲಿಗೆ ಸಂಜು ಸೇರ್ಪಡೆಯಾದರು. ಇತ್ತ ಇಶಾನ್ ಕಿಶನ್ ಕೂಡ ಕೇವಲ 25 ಎಸೆತಗಳಲ್ಲಿ 54 ರನ್ ಚಚ್ಚಿ ಪೆವಿಲಿಯನ್ ಸೇರಿದರು.

15 ಓವರ್‌ಗೆ 200 ರನ್: 

ಭಾರತ ತಂಡ 15 ಓವರ್‌ಗಳ ಮುಕ್ತಾಯಕ್ಕೆ 200 ರನ್ ಗಡಿ ದಾಟಿತ್ತು. ಒಂದು ಹಂತದಲ್ಲಿ ಸ್ಕೋರ್ 300 ತಲುಪುವ ಲಕ್ಷಣಗಳಿದ್ದವು. ಆದರೆ, ಇಶಾನ್ ಕಿಶನ್ ವಿಕೆಟ್ ಪತನದ ಬಳಿಕ ದಿಢೀರ್ ಕುಸಿತ ಕಂಡುಬಂದಿತು.

ನ್ಯೂಜಿಲೆಂಡ್ ಬೌಲರ್‌ಗಳು ಅಂತಿಮ ಐದು ಓವರ್‌ಗಳಲ್ಲಿ ವಿಕೆಟ್ ಪಡೆಯುವ ಮೂಲಕ ರನ್ ವೇಗಕ್ಕೆ ಸ್ವಲ್ಪ ಮಟ್ಟಿನ ಬ್ರೇಕ್ ಹಾಕುವಲ್ಲಿ ಯಶಸ್ವಿಯಾದರು. ಆದರೂ, 256 ರನ್‌ಗಳ ಗುರಿ ಬೆನ್ನಟ್ಟುವುದು ಕಿವಿ ಪಡೆಗೆ ಅಗ್ನಿಪರೀಕ್ಷೆಯಾಗಲಿದೆ. ಭಾರತದ ಬೌಲರ್‌ಗಳು ಈ ಬೃಹತ್ ಮೊತ್ತವನ್ನು ಹೇಗೆ ಡಿಫೆಂಡ್ ಮಾಡಿಕೊಳ್ಳುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

Exit mobile version