ಭಾರತದ ವಿರುದ್ಧ ಆಡಲು ಐಸಿಸಿ ಮುಂದೆ 3 ಷರತ್ತು ವಿಧಿಸಿದ ಪಿಸಿಬಿ: ಫೆ.15ಕ್ಕೆ ಪಂದ್ಯ ನಡೆಯುತ್ತಾ?

Untitled design 2026 02 09T123044.179

ನವದೆಹಲಿ/ಲಾಹೋರ್‌: ಟಿ20 ವಿಶ್ವಕಪ್‌ನಲ್ಲಿ ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಭಾರತ–ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ ಇದೀಗ ಹೊಸ ವಿವಾದಕ್ಕೆ ಸಿಲುಕಿದೆ. ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೋದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಬಾಯ್‌ಕಾಟ್ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಭಾನುವಾರ ಘೋಷಣೆ ಮಾಡಿತ್ತು. ಆದರೆ ಪಂದ್ಯಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಪಾಕಿಸ್ತಾನ ತನ್ನ ನಿಲುವನ್ನು ಬದಲಾಯಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಬಾಂಗ್ಲಾದೇಶವನ್ನು ಟಿ20 ವಿಶ್ವಕಪ್‌ನಿಂದ ಹೊರಗಿಟ್ಟಿರುವುದನ್ನು ಖಂಡಿಸಿ, ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಮೊದಲಿಗೆ ಘೋಷಿಸಿತ್ತು. ಈ ನಿರ್ಧಾರದಿಂದ ಐಸಿಸಿ (ICC) ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಭಾರತ–ಪಾಕಿಸ್ತಾನ ಪಂದ್ಯ ರದ್ದಾದರೆ ವಿಶ್ವಕಪ್‌ನ ವಾಣಿಜ್ಯ ಮೌಲ್ಯಕ್ಕೆ ಭಾರೀ ಹೊಡೆತ ಬೀಳಲಿದೆ ಎಂಬ ಎಚ್ಚರಿಕೆಯನ್ನು ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (PCB) ನೀಡಿತ್ತು.

ಐಸಿಸಿ ಎಚ್ಚರಿಕೆಯ ಬಳಿಕ ಪಾಕ್‌ ನಿಲುವು

ಐಸಿಸಿಯ ಕಠಿಣ ಎಚ್ಚರಿಕೆಯ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಹಿಂದೆ ಸರಿಯುವ ಸಾಧ್ಯತೆ ಕಂಡುಬರುತ್ತಿದೆ. ಆದರೆ ನೇರವಾಗಿ ಪಂದ್ಯಕ್ಕೆ ಒಪ್ಪಿಗೆ ನೀಡದೇ, ಐಸಿಸಿ ಎದುರು ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಈ ವಿವಾದವನ್ನು ಬಗೆಹರಿಸಲು ಐಸಿಸಿ ಅಧಿಕಾರಿಗಳು ತುರ್ತಾಗಿ ಪಾಕಿಸ್ತಾನದ ಲಾಹೋರ್‌ಗೆ ತೆರಳಿದ್ದಾರೆ.

ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣದಲ್ಲಿ ಸುಮಾರು ಐದು ಗಂಟೆಗಳ ಕಾಲ ಸುದೀರ್ಘ ಸಭೆ ನಡೆದಿದ್ದು, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹಾಗೂ ಐಸಿಸಿ ಉಪಾಧ್ಯಕ್ಷ ಅಮೀನುಲ್ ಇಸ್ಲಾಂ ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಭಾರತ–ಪಾಕಿಸ್ತಾನ ಪಂದ್ಯ ಭವಿಷ್ಯ, ವಾಣಿಜ್ಯ ನಷ್ಟ ಹಾಗೂ ರಾಜತಾಂತ್ರಿಕ ಒತ್ತಡಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಮೂರು ಬೇಡಿಕೆಗಳೇನು?

ಮೊದಲನೆಯದಾಗಿ, ಐಸಿಸಿ ಆದಾಯದಲ್ಲಿ ಪಾಕಿಸ್ತಾನಕ್ಕೆ ಹೆಚ್ಚಿನ ಪಾಲು ನೀಡಬೇಕು ಎಂಬುದು ಪಾಕಿಸ್ತಾನದ ಪ್ರಮುಖ ಬೇಡಿಕೆಯಾಗಿದೆ. ಪಾಕಿಸ್ತಾನ ವರ್ಷಕ್ಕೆ ಐಸಿಸಿ ನಿಧಿಯಿಂದ ಸುಮಾರು 34.5 ಮಿಲಿಯನ್ ಡಾಲರ್ ಪಡೆಯುತ್ತಿದೆ. ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಬಳಿಕ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಭಾರತ–ಪಾಕಿಸ್ತಾನ ಪಂದ್ಯದಿಂದ ಐಸಿಸಿಗೆ ಅಪಾರ ಆದಾಯ ಬರುತ್ತಿರುವ ಹಿನ್ನೆಲೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಬೇಕೆಂದು ಪಿಸಿಬಿ ಒತ್ತಾಯಿಸಿದೆ.

ಎರಡನೆಯದಾಗಿ, ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳನ್ನು ಪುನರಾರಂಭಿಸಬೇಕು ಎಂಬ ಬೇಡಿಕೆಯನ್ನು ಪಾಕಿಸ್ತಾನ ಮುಂದಿಟ್ಟಿದೆ. ಹಲವು ವರ್ಷಗಳಿಂದ ಭಾರತ–ಪಾಕಿಸ್ತಾನ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯದೇ ಇರುವುದರಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಆರ್ಥಿಕ ನಷ್ಟವಾಗುತ್ತಿದೆ ಎಂಬುದು ಪಾಕ್‌ ವಾದವಾಗಿದೆ.

ಮೂರನೆಯದಾಗಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರೊಂದಿಗೆ ಕೈಕುಲುಕಬೇಕು ಎಂದು ಪಿಸಿಬಿ ಹೇಳಿದೆ. ಇದು ‘ಸ್ಪೋರ್ಟ್ಸ್‌ಮ್ಯಾನ್‌ ಸ್ಪಿರಿಟ್‌’ಗೆ ಸಂಬಂಧಿಸಿದ ವಿಷಯ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಬಿಸಿಬಿಯೂ ಐಸಿಸಿ ಎದುರು ಬೇಡಿಕೆ

ಈ ನಡುವೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಕೂಡ ಐಸಿಸಿ ಎದುರು ಕೆಲವು ಬೇಡಿಕೆಗಳನ್ನು ಇಟ್ಟಿದೆ. ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಅವರು ಐಸಿಸಿ ಟೂರ್ನಮೆಂಟ್‌ ಆಯೋಜಿಸುವ ಹಕ್ಕುಗಳು ಹಾಗೂ ಹಣಕಾಸಿನ ಪರಿಹಾರವನ್ನು ಕೇಳಿದ್ದಾರೆ ಎನ್ನಲಾಗಿದೆ.

ಪಂದ್ಯ ನಡೆಯದಿದ್ದರೆ ನಷ್ಟ ಯಾರಿಗೆ?

ಭಾರತ–ಪಾಕಿಸ್ತಾನ ಪಂದ್ಯ ಕ್ರಿಕೆಟ್‌ ಜಗತ್ತಿನ ಅತಿ ದೊಡ್ಡ ಹಣಕಾಸಿನ ಪಂದ್ಯವೆಂದು ಹೇಳಲಾಗುತ್ತದೆ. ಪ್ರಸಾರ ಹಕ್ಕುಗಳು, ಜಾಹೀರಾತುಗಳು ಮತ್ತು ಪ್ರಾಯೋಜಕತ್ವದ ಬಹುಪಾಲು ಆದಾಯ ಈ ಒಂದೇ ಪಂದ್ಯದಿಂದ ಬರುತ್ತದೆ. ಪಂದ್ಯ ರದ್ದಾದರೆ ಐಸಿಸಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಲಿದೆ. ಜೊತೆಗೆ ಪಂದ್ಯ ನಡೆಯಬೇಕಿರುವ ಶ್ರೀಲಂಕಾದ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

Exit mobile version