ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್: ಪೊಲೀಸರಿಗೆ ಹೆದರಿ ಯುವಕ ಆತ್ಮಹ*ತ್ಯೆ!

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (4)

ತಿರುವನಂತಪುರ: ಪ್ರೀತಿ, ನಂಬಿಕೆ ಮತ್ತು ತಂತ್ರಜ್ಞಾನದ ದುರುಪಯೋಗವು ಹೇಗೆ ಒಂದು ಜೀವವನ್ನು ಬಲಿ ಪಡೆಯಬಲ್ಲದು ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ತನ್ನ ಪ್ರೇಯಸಿಯ ಜೊತೆಗಿನ ಖಾಸಗಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾದ ಬೆನ್ನಲ್ಲೇ, ಪ್ರಕರಣದಲ್ಲಿ ಆರೋಪಿಯಾಗಿದ್ದ 27 ವರ್ಷದ ಯುವಕ ಕಿರಣ್ ಎಂಬಾತ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಏನಿದು ಘಟನೆ ?

ತೋನ್ನಕ್ಕಲ್‌ನ ಲಾಲ್‌ಬಾಗ್‌ ನಿವಾಸಿಯಾದ ಕಿರಣ್ (27) ಕಳೆದ ಕೆಲವು ಸಮಯದಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವಿನ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಆದರೆ, ಇತ್ತೀಚೆಗೆ ಈ ವಿಡಿಯೋಗಳು ಕಿರಣ್‌ನ ಮೊಬೈಲ್‌ನಿಂದ ಹೊರಬಂದು ಹರಿದಾಡತೊಡಗಿತ್ತು. ಇದರಿಂದ ಆಘಾತಕ್ಕೊಳಗಾದ ಯುವತಿಯ ಕುಟುಂಬಸ್ಥರು, ಕಿರಣ್ ಉದ್ದೇಶಪೂರ್ವಕವಾಗಿ ವಿಡಿಯೋ ಲೀಕ್ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.

ಯುವತಿಯ ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಿರಣ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ, ಕಿರಣ್ ತನ್ನ ಆಪ್ತರ ಬಳಿ ನಾನು ಈ ವಿಡಿಯೋಗಳನ್ನು ಲೀಕ್ ಮಾಡಿಲ್ಲ, ನನ್ನ ಫೋನ್‌ನಿಂದ ಯಾರೋ ಕದ್ದು ಹರಿಬಿಟ್ಟಿದ್ದಾರೆ ಎಂದು ಗೋಳಾಡಿದ್ದ ಎನ್ನಲಾಗಿದೆ. ಪ್ರಕರಣ ದಾಖಲಾದ ನಂತರ ಪೊಲೀಸರು ಕಿರಣ್ ಮನೆಗೆ ವಿಚಾರಣೆಗೆ ಬಂದಿದ್ದರು. ಪೊಲೀಸ್ ಜೀಪ್ ಕಂಡ ತಕ್ಷಣ ಗಾಬರಿಗೊಂಡ ಕಿರಣ್, ಮನೆಯಿಂದ ಹೊರಹೋಗಿದ್ದ.

ಸ್ನೇಹಿತನ ಮನೆಯಲ್ಲಿ ಅಂತ್ಯ

ಪೊಲೀಸರ ಬಂಧನದ ಭೀತಿಯಲ್ಲಿದ್ದ ಕಿರಣ್ ಭಾನುವಾರ ರಾತ್ರಿ ತನ್ನ ಪಕ್ಕದ ಮನೆಯ ಸ್ನೇಹಿತನ ಬಳಿ ಹೋಗಿ ಉಳಿದುಕೊಂಡಿದ್ದ. ಆದರೆ ಸೋಮವಾರ ಮುಂಜಾನೆ 6 ಗಂಟೆಯ ಸುಮಾರಿಗೆ ಸ್ನೇಹಿತ ಎದ್ದು ನೋಡುವಷ್ಟರಲ್ಲಿ ಕಿರಣ್ ರೂಮಿನ ಹುಕ್‌ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಖಾಸಗಿ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುವುದು ಮತ್ತು ಅವುಗಳನ್ನು ಸುರಕ್ಷಿತವಾಗಿಡದಿದ್ದರೆ ಎಂತಹ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಈ ಪ್ರಕರಣ ಎಚ್ಚರಿಕೆಯ ಗಂಟೆಯಾಗಿದೆ. ವಿಡಿಯೋ ಲೀಕ್ ಮಾಡಿದ್ದು ಕಿರಣ್‌ನೋ ಅಥವಾ ಆತನ ಫೋನ್ ಹ್ಯಾಕ್ ಮಾಡಿ ಬೇರೆಯವರು ಮಾಡಿದ್ದಾರೋ ಎಂಬ ಸತ್ಯ ಈಗ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ

Exit mobile version