ನ್ಯೂಜಿಲೆಂಡ್‌ ವಿರುದ್ಧ ಭಾರತದ ಭರ್ಜರಿ ಗೆಲುವು: ಅಭಿಷೇಕ್‌ ಶರ್ಮಾ ಅಬ್ಬರದ ಅರ್ಧಶತಕ

Untitled design 2026 01 21T231034.903

ನಾಗ್ಪುರ, ಜ.21: ಅಭಿಷೇಕ್‌ ಶರ್ಮಾ ಅವರ ಅಬ್ಬರದ ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತ ನ್ಯೂಜಿಲ್ಯಾಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 48 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಮ್‌ ಇಂಡಿಯಾ, 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 238 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಈ ಕಠಿಣ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 190 ರನ್‌ಗಳಿಗಷ್ಟೇ ಸೀಮಿತವಾಯಿತು.

ಅಭಿಷೇಕ್‌ ಶರ್ಮಾ- ಇನಿಂಗ್ಸ್‌ನ ಹೀರೋ

ಭಾರತದ ಇನಿಂಗ್ಸ್‌ಗೆ ಭರ್ಜರಿ ಚಾಲನೆ ನೀಡಿದ ಅಭಿಷೇಕ್‌ ಶರ್ಮಾ, ಆರಂಭದಿಂದಲೇ ನ್ಯೂಜಿಲ್ಯಾಂಡ್‌ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಶಾರ್ಟ್‌ ಬಾಲ್‌, ಫುಲ್‌ ಲೆಂಗ್ತ್‌ ಎಸೆತಗಳೆಲ್ಲವೂ ಅವರ ಬ್ಯಾಟ್‌ಗೆ ತಾಕಿ ಬೌಂಡರಿ ಹಾಗೂ ಸಿಕ್ಸರ್‌ಗಳಾಗಿ ಹೊರಟವು. ಕೇವಲ 34 ಎಸೆತಗಳಲ್ಲಿ 84 ರನ್‌ ಗಳಿಸಿದ ಅಭಿಷೇಕ್‌, 8 ಸಿಕ್ಸರ್‌ ಮತ್ತು 5 ಬೌಂಡರಿ ಸಿಡಿಸಿದರು. ಶತಕದತ್ತ ಸಾಗುತ್ತಿದ್ದ ಅವರು ಸಿಕ್ಸರ್‌ ಪ್ರಯತ್ನದಲ್ಲಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು.

ಅಭಿಷೇಕ್‌ಗೆ ನಾಯಕ ಸೂರ್ಯಕುಮಾರ್‌ ಯಾದವ್‌ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿ ಮೂರನೇ ವಿಕೆಟ್‌ಗೆ 99 ರನ್‌ಗಳ ಅಮೂಲ್ಯ ಪಾಲುದಾರಿಕೆ ನಿರ್ಮಿಸಿತ್ತು. ಸೂರ್ಯಕುಮಾರ್‌ 32 ರನ್‌ (1 ಸಿಕ್ಸರ್‌, 4 ಬೌಂಡರಿ) ಗಳಿಸಿ ಔಟಾದರು.

ರಿಂಕು ಸಿಂಗ್‌ ಅಂತಿಮ ಘಟ್ಟದ ಅಬ್ಬರ

ಇನಿಂಗ್ಸ್‌ನ ಅಂತಿಮ ಹಂತದಲ್ಲಿ ರಿಂಕು ಸಿಂಗ್‌ ಕೇವಲ 20 ಎಸೆತಗಳಲ್ಲಿ ಅಜೇಯ 44 ರನ್‌ ಗಳಿಸಿ ಪಂದ್ಯಕ್ಕೆ ತಿರುವು ನೀಡಿದರು. 3 ಸಿಕ್ಸರ್‌ ಮತ್ತು 4 ಬೌಂಡರಿ ಒಳಗೊಂಡ ಅವರ ಸ್ಫೋಟಕ ಆಟದಿಂದ ಭಾರತ 200ರ ಗಡಿ ದಾಟಿತ್ತು. ಡ್ಯಾರಿಲ್‌ ಮಿಚೆಲ್‌ ಎಸೆದ ಕೊನೆಯ ಓವರ್‌ನಲ್ಲಿ ರಿಂಕು 21 ರನ್‌ ದೋಚಿದ್ದು ಕಿವೀಸ್‌ ಬೌಲರ್‌ಗಳಿಗೆ ಭಾರೀ ಹೊಡೆತವಾಯಿತು. ಹಾರ್ದಿಕ್‌ ಪಾಂಡ್ಯ 16 ಎಸೆತಗಳಲ್ಲಿ 25 ರನ್‌ ಗಳಿಸಿ ತಂಡಕ್ಕೆ ಕೊಡುಗೆ ನೀಡಿದರು.

ಆದರೆ ಸಂಜು ಸ್ಯಾಮ್ಸನ್‌ (10), ಇಶಾನ್‌ ಕಿಶನ್‌ (8), ಶಿವಂ ದುಬೆ (9) ಮತ್ತು ಅಕ್ಷರ್‌ ಪಟೇಲ್‌ (5) ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದರು. ನ್ಯೂಜಿಲ್ಯಾಂಡ್‌ ಪರ ಜಾಕಬ್‌ ಡಫಿ ಮತ್ತು ಕೈಲ್‌ ಜೇಮಿಸನ್‌ ತಲಾ ಎರಡು ವಿಕೆಟ್‌ ಕಿತ್ತರು.

ಬೌಲರ್‌ಗಳ ಶಿಸ್ತುಬದ್ಧ ದಾಳಿ

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್‌ಗೆ ಭಾರತದ ಬೌಲರ್‌ಗಳು ಆರಂಭದಲ್ಲೇ ಆಘಾತ ನೀಡಿದರು. ಮೊದಲ ಓವರ್‌ನಲ್ಲೇ ಅರ್ಶ್‌ದೀಪ್‌ ಸಿಂಗ್‌ ಡೆವನ್‌ ಕಾನ್ವೇ (0) ವಿಕೆಟ್‌ ಕಿತ್ತರು. ಸಂಜು ಸ್ಯಾಮ್ಸನ್‌ ಹಿಡಿದ ಅದ್ಭುತ ಡೈವಿಂಗ್‌ ಕ್ಯಾಚ್‌ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಮುಂದಿನ ಓವರ್‌ನಲ್ಲಿ ಹಾರ್ದಿಕ್‌ ಪಾಂಡ್ಯ ರಚಿನ್‌ ರವೀಂದ್ರ (1) ಅವರನ್ನು ಔಟ್‌ ಮಾಡಿದರು.

ಒಂದು ರನ್‌ಗೆ ಎರಡು ವಿಕೆಟ್‌ ಕಳೆದುಕೊಂಡ ಕಿವೀಸ್‌ ಸಂಕಷ್ಟಕ್ಕೆ ಸಿಲುಕಿತ್ತು. ಗ್ಲೆನ್‌ ಫಿಲಿಪ್ಸ್‌ ಮತ್ತು ಟಿಮ್‌ ರಾಬಿನ್ಸನ್‌ ಪ್ರತಿರೋಧ ತೋರಿದರೂ, ರಾಬಿನ್ಸನ್‌ (21) ಔಟಾದ ಬಳಿಕ ಮತ್ತೆ ಒತ್ತಡ ಹೆಚ್ಚಾಯಿತು. ಫಿಲಿಪ್ಸ್‌ 40 ಎಸೆತಗಳಲ್ಲಿ 78 ರನ್‌ಗಳ ಹೋರಾಟದ ಇನಿಂಗ್ಸ್‌ ಆಡಿದರೂ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ.

ಸೂರ್ಯಕುಮಾರ್‌ಗೆ ಐತಿಹಾಸಿಕ ಮೈಲಿಗಲ್ಲು

ಈ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ತಮ್ಮ 100ನೇ ಟಿ20 ಅಂತರರಾಷ್ಟ್ರೀಯ ಪಂದ್ಯವಾಡಿ ಮಹತ್ವದ ಸಾಧನೆ ಮಾಡಿದರು. 100 ಅಥವಾ ಅದಕ್ಕಿಂತ ಹೆಚ್ಚು ಟಿ20ಐ ಪಂದ್ಯವಾಡಿದ ನಾಲ್ಕನೇ ಭಾರತೀಯ ಆಟಗಾರರಾಗಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್‌ ಶರ್ಮಾ (159), ವಿರಾಟ್‌ ಕೊಹ್ಲಿ (125) ಮತ್ತು ಹಾರ್ದಿಕ್‌ ಪಾಂಡ್ಯ (125) ಮೊದಲಿಗರಾಗಿದ್ದಾರೆ.

Exit mobile version