ಬೆಂಗಳೂರು: ದಿನವೂ ಮಿಸ್ ಮಾಡದೆ ಪ್ರೋಟೀನ್ ಬೇಕು ಅಂತ ಮೊಟ್ಟೆ (Egg) ತಿನ್ನೋರಿಗೆ ಹಾಗೂ ಭಾನುವಾರ ಬಂದ್ರೆ ಚಿಕನ್ ಊಟ ಇರಲೇಬೇಕು ಅನ್ನೋರಿಗೆ ಇದೊಂದು ಶಾಕಿಂಗ್ ಸುದ್ದಿ. ಕೋಳಿ (Chicken) ಮಾಂಸ ಮತ್ತು ಮೊಟ್ಟೆಯ ಬೆಲೆ (Egg & Chicken Price Hike) ದಿಢೀರನೆ ಗಗನಕ್ಕೇರಿದ್ದು, ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳ ಸಾವಿರಾರು ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದು ಸಾಮಾನ್ಯ ಜನರಿಗೆ ಈ ಬೆಲೆ ಏರಿಕೆ ಮತ್ತೊಂದು ಹೊಡೆತವಾಗಿದೆ.
250 ರೂಪಾಯಿ ಆಸುಪಾಸಿನಲ್ಲಿದ್ದ ಸ್ಕಿನ್‌ಲೆಸ್ ಚಿಕನ್ (Skinless Chicken) ಬೆಲೆ, ಈಗ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬರೋಬ್ಬರಿ 340 ರಿಂದ 350 ರೂಪಾಯಿ ಗಡಿ ದಾಟಿದೆ. ಇನ್ನು ವಿತ್ ಸ್ಕಿನ್ ಚಿಕನ್ 320 ರೂ. ಹಾಗೂ ಜೀವಂತ ಕೋಳಿ ಬೆಲೆ ಕೆಜಿಗೆ 210 ರೂ. ದಾಟಿದೆ.
ಇದು ಚಿಕನ್ ಕಥೆಯಾದರೆ, ಬಡವರ ಪ್ರೋಟೀನ್ ಎಂದೇ ಕರೆಯಲ್ಪಡುವ ಮೊಟ್ಟೆ ಕಥೆ ಇನ್ನಷ್ಟು ರೋಚಕ. ಕೇವಲ 80 ರೂಪಾಯಿಗೆ ಸಿಗುತ್ತಿದ್ದ ಒಂದು ಡಜನ್ ಮೊಟ್ಟೆ ಈಗ 90 ರಿಂದ 100 ರೂ. ತಲುಪಿದೆ. ರಿಟೇಲ್ ಅಂಗಡಿಗಳಲ್ಲಿ ಒಂದು ಬಿಡಿ ಮೊಟ್ಟೆಗೆ 8.50 ಯಿಂದ 10 ರೂಪಾಯಿವರೆಗೂ ಮಾರಾಟವಾಗುತ್ತಿದೆ.
ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (NECC) ದತ್ತಾಂಶದ ಪ್ರಕಾರವೇ, ಮೇ ತಿಂಗಳಲ್ಲಿ 100 ಮೊಟ್ಟೆಗೆ 598.5 ರೂ. ಇದ್ದ ಹೋಲ್ ಸೇಲ್ ರೇಟ್, ಜೂನ್‌ನಲ್ಲಿ 671.7 ರೂ.ಗೆ ಏರಿ, ಈಗ ಜುಲೈನಲ್ಲಿ 710 ರೂ.ಗೆ ಮುಟ್ಟಿದೆ. ಇದು ಕೇವಲ ಒಂದೂವರೆ ತಿಂಗಳಿನ ಅವಧಿಯಲ್ಲಿ 100 ಮೊಟ್ಟೆಗಳ ಬೆಲೆಯಲ್ಲಿ 111.5 ರೂಪಾಯಿ ಏರಿಕೆಯಾಗಿದೆ.
ಬೇಡಿಕೆ ಹೆಚ್ಚು, ಸಪ್ಪೆ ಕಮ್ಮಿ: ಬೆಲೆ ಏರಿಕೆಗೆ ಅಸಲಿ ಕಾರಣವೇನು?
ಮಳೆಗಾಲ ಶುರುವಾಗಿರುವುದರಿಂದ ಚಳಿಗೆ ಮೊಟ್ಟೆ ಮತ್ತು ಚಿಕನ್ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ (ಸಪ್ಪೆ) ಮಾತ್ರ ಪಾತಾಳಕ್ಕೆ ಕುಸಿದಿದೆ. ಬೆಂಗಳೂರಿಗೆ ಪ್ರತಿದಿನ 65-70 ಲಕ್ಷ ಮೊಟ್ಟೆಗಳ ಅಗತ್ಯವಿರುತ್ತದೆ. ಕರ್ನಾಟಕದಲ್ಲಿ ದಿನಕ್ಕೆ 2.5 ರಿಂದ 3 ಕೋಟಿ ಮೊಟ್ಟೆ ಉತ್ಪಾದನೆಯಾದರೂ, ಕೊರತೆ ನೀಗಿಸಲು ತಮಿಳುನಾಡಿನ ನಾಮಕ್ಕಲ್‌ನಿಂದ ದಿನವೂ 30-40 ಲಕ್ಷ ಮೊಟ್ಟೆಗಳು ಬರಬೇಕಾಗುತ್ತದೆ.
ಆದರೆ ನೆರೆಯ ಆಂಧ್ರ ಮತ್ತು ತಮಿಳುನಾಡಿನಲ್ಲಿ ಇತ್ತೀಚೆಗೆ ವಿಪರೀತ ಬಿಸಿಲಿದ್ದ ಕಾರಣ, ಕೋಳಿಗಳ ಮೊಟ್ಟೆ ಇಡುವ ಸಾಮರ್ಥ್ಯವೇ ಕುಸಿದಿದೆ.. ಬಿಸಿಲಿನ ಬೇಗೆ ತಾಳಲಾರದೆ ದೊಡ್ಡ ಪ್ರಮಾಣದಲ್ಲಿ ಕೋಳಿಗಳು ಮೃತಪಟ್ಟಿವೆ. ಕೋಳಿ ಸಾಕಾಣಿಕೆಗೆ ಬಳಸುವ ಮೇವು ಅಥವಾ ಆಹಾರದ ವೆಚ್ಚ (Feed Cost) ಹೆಚ್ಚಾಗಿರುವುದು ಕೂಡ ಈ ದಿಢೀರ್ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸೋಯಾ ಮತ್ತು ಜೋಳದ ಬೆಲೆಗಳು ಏರಿಕೆಯಾಗಿರುವುದು ಮೇವಿನ ವೆಚ್ಚದ ಮೇಲೆ ಪರಿಣಾಮ ಬೀರಿದೆ. ಇದು ಕೋಳಿ ಸಾಕಾಣಿಕೆದಾರರ ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದ್ದು, ಅಂತಿಮವಾಗಿ ಗ್ರಾಹಕರ ಮೇಲೆ ಭಾರವಾಗಿದೆ.
ಮುಂದಿನ ದಿನಗಳಲ್ಲಿ ಬೆಲೆ ಇಳಿಯುವ ಸಾಧ್ಯತೆಯೇ?
ವ್ಯಾಪಾರ ಮೂಲಗಳ ಪ್ರಕಾರ, ಮುಂದಿನ 3-4 ವಾರಗಳಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ಹೊಸ ಮಳೆಗಾಲದ ಮೇವು ಲಭ್ಯವಾದ ನಂತರ ಮತ್ತು ತಾಪಮಾನ ಇಳಿಕೆಯಾದ ನಂತರ ಮೊಟ್ಟೆ ಉತ್ಪಾದನೆ ಸ್ಥಿರಗೊಳ್ಳಲಿದೆ. ಆಗ ಬೆಲೆಗಳು ಸ್ವಲ್ಪ ಮಟ್ಟಿಗೆ ಕುಸಿಯಬಹುದು. ಆದರೆ ಸದ್ಯಕ್ಕಂತೂ ನಾನ್‌ವೆಜ್ ಪ್ರಿಯರು ಮತ್ತು ಜಿಮ್‌ಗೆ ಹೋಗುವವರು ಮೊಟ್ಟೆ ಚಿಕನ್‌ಗಾಗಿ ಜೇಬಿನಿಂದ ಹೆಚ್ಚಿನ ಹಣ ಖರ್ಚು ಮಾಡುವುದು ಅನಿವಾರ್ಯವಾಗಿದೆ.
