ಲಂಡನ್: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ 6 ರನ್‌ಗಳ ಅತ್ಯಂತ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ದೀರ್ಘಾವಧಿಯ ಇಂಗ್ಲೆಂಡ್ ಪ್ರವಾಸವನ್ನು ಅದ್ಭುತವಾಗಿ ಮುಗಿಸಿತು. ಭಾರತ ತಂಡವನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಮುಕ್ತಕಂಠದಿಂದ ಹೊಗಳಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಸಚಿನ್, “ಟೆಸ್ಟ್ ಕ್ರಿಕೆಟ್ ನಿಜಕ್ಕೂ ರೋಮಾಂಚನಕಾರಿ. ಸರಣಿ 2–2, ಪ್ರದರ್ಶನ 10/10! ಭಾರತದಿಂದ ಸೂಪರ್‌ಮೆನ್! ಎಂತಹ ಗೆಲುವು, ಇಂಡಿಯಾ,” ಎಂದು ಬರೆದು ತಂಡಕ್ಕೆ 10ಕ್ಕೆ 10 ಅಂಕಗಳನ್ನು ನೀಡಿದ್ದಾರೆ.
Test cricket… absolute goosebumps.
Series 2–2, Performance 10/10!SUPERMEN from INDIA! What a Win. 💙🇮🇳🏏 pic.twitter.com/ORm1EVcbRH
— Sachin Tendulkar (@sachin_rt) August 4, 2025
ಈ ರೋಮಾಂಚಕ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ಗೆ 374 ರನ್‌ಗಳ ಗುರಿಯನ್ನು ನೀಡಿತ್ತು. ಇಂಗ್ಲೆಂಡ್ ತಂಡ, ಜೋ ರೂಟ್ ಮತ್ತು ಹ್ಯಾರಿ ಬ್ರೂಕ್‌ರ ಶತಕಗಳ ಬಲದಿಂದ ನಾಲ್ಕನೇ ದಿನದ ಅಂತ್ಯಕ್ಕೆ 6 ವಿಕೆಟ್‌ಗೆ 339 ರನ್ ಗಳಿಸಿತ್ತು. ಆದರೆ, ಐದನೇ ದಿನವಾದ ಸೋಮವಾರ, ಮೊಹಮ್ಮದ್ ಸಿರಾಜ್‌ರ ಮಾರಕ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತಂಡ ಕುಸಿಯಿತು. ಕೊನೆಯ ದಿನದಂದು ಸಿರಾಜ್ 3 ವಿಕೆಟ್‌ಗಳನ್ನು ಕಿತ್ತು, ಒಟ್ಟಾರೆಯಾಗಿ ಈ ಟೆಸ್ಟ್‌ನಲ್ಲಿ 9 ವಿಕೆಟ್‌ಗಳನ್ನು ಮತ್ತು ಸರಣಿಯಲ್ಲಿ 26 ವಿಕೆಟ್‌ಗಳನ್ನು ಪಡೆದು ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದರು. ಇಂಗ್ಲೆಂಡ್ ಕೇವಲ 6 ರನ್‌ಗಳಿಂದ ಸೋಲನ್ನು ಒಪ್ಪಿಕೊಂಡಿತ್ತು.
ಶುಭಮನ್ ಗಿಲ್ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಸರಣಿಯಲ್ಲಿ ಮಿಂಚಿತ್ತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಸ್ಟಾರ್ ಆಟಗಾರರಿಲ್ಲದಿದ್ದರೂ, ಯುವ ತಂಡವು ತೀವ್ರವಾಗಿ ಹೋರಾಡಿತ್ತು. ಗಿಲ್ 5 ಟೆಸ್ಟ್ ಪಂದ್ಯಗಳಲ್ಲಿ 750ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿ, ತಂಡವನ್ನು ಮುಂಚೂಣಿಯಲ್ಲಿ ಮುನ್ನಡೆಸಿದರು. ಪಂದ್ಯದ ನಂತರ ಮಾತನಾಡಿದ ಗಿಲ್, “ಕೊನೆಯ ಕ್ಷಣದವರೆಗೂ ತಂಡವು ಬಿಟ್ಟುಕೊಡದ ಮನೋಭಾವವನ್ನು ತೋರಿತ್ತು. ಸಿರಾಜ್ ಅವರ ಬೌಲಿಂಗ್ ಮತ್ತು ತಂಡದ ಒಗ್ಗಟ್ಟಿನಿಂದ ಈ ಗೆಲುವು ಸಾಧ್ಯವಾಯಿತು,” ಎಂದು ಶ್ಲಾಘಿಸಿದರು.