ನವದೆಹಲಿ: ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ ‘ಕರ್ತವ್ಯ ಪಥ’ (Kartavya Path) ವಿಶ್ವವೇ ಬೆರಗಾಗುವಂತಹ ಪರಾಕ್ರಮ ಮತ್ತು ಸಂಸ್ಕೃತಿಯ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಬೆಳಿಗ್ಗೆ ಸರಿಯಾಗಿ 10:30ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತ್ರಿವರ್ಣ ಧ್ವಜಾರೋಹಣ ನೆರೆವೇರಿಸಿದರು. ಈ ವೇಳೆ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ 21 ಫಿರಂಗಿಗಳ ಗುಂಡಿನ ಮೊರೆತದೊಂದಿಗೆ ಗೌರವ ಸಲ್ಲಿಸಲಾಯಿತು. ಧ್ವಜಾರೋಹಣದ ಬೆನ್ನಲ್ಲೇ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಆಕಾಶದಿಂದ ಪುಷ್ಪವೃಷ್ಟಿ ಮಾಡಿತು.
ಈ ಬಾರಿಯ ಗಣರಾಜ್ಯೋತ್ಸವಕ್ಕೆ ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಲೂಯಿಸ್ ಸ್ಯಾಂಟೋಸ್ ಡ ಕೋಸ್ಟಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೌರವ ಹೆಚ್ಚಿಸಿದರು. ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಬಾಂಧವ್ಯಕ್ಕೆ ಈ ಉಪಸ್ಥಿತಿಯು ಸಾಕ್ಷಿಯಾಯಿತು.
ಪರೇಡ್ ಆರಂಭವಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್‌ನಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರಿಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಮೂರೂ ಸೇನಾಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
‘ವಂದೇ ಮಾತರಂ’ ಮತ್ತು ‘ಆತ್ಮನಿರ್ಭರ ಭಾರತ’ದ ಸ್ತಬ್ಧಚಿತ್ರಗಳು
ಈ ಬಾರಿಯ ಪರೇಡ್‌ನ ಕೇಂದ್ರಬಿಂದು ಸ್ವತಂತ್ರ ಕಾ ಮಂತ್ರ: ವಂದೇ ಮಾತರಂ’ ಮತ್ತು ‘ಸಮೃದ್ಧಿ ಕಾ ಮಂತ್ರ: ಆತ್ಮನಿರ್ಭರ ಭಾರತ’ ಎಂಬ ಆಶಯಗಳು. ಒಟ್ಟು 30 ಸ್ತಬ್ಧಚಿತ್ರಗಳು ಕರ್ತವ್ಯ ಪಥದಲ್ಲಿ ಸಾಗಿದವು. ಇದರಲ್ಲಿ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ 13 ಕೇಂದ್ರ ಸಚಿವಾಲಯಗಳ ಟ್ಯಾಬ್ಲೋಗಳು ಭಾಗವಹಿಸಿದ್ದವು.
ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ರಾಷ್ಟ್ರೀಯ ಗೀತೆ ವಂದೇ ಮಾತರಂಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶೇಷ ಸ್ತಬ್ಧಚಿತ್ರವನ್ನು ವಿನ್ಯಾಸಗೊಳಿಸಲಾಗಿತ್ತು. ಇದು ಭಾರತದ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ನೆನಪಿಸಿದರೆ, ಇತರ ಸ್ತಬ್ಧಚಿತ್ರಗಳು ಬಾಹ್ಯಾಕಾಶ, ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಸ್ವಾವಲಂಬನೆಯನ್ನು (ಆತ್ಮನಿರ್ಭರತೆ) ಜಗತ್ತಿಗೆ ಸಾರಿದವು.
ಸಾಂಸ್ಕೃತಿಕ ವೈವಿಧ್ಯತೆಯ ಅನಾವರಣ
ಭಾರತದ ಶ್ರೀಮಂತ ಮತ್ತು ರೋಮಾಂಚಕ ಸಾಂಸ್ಕೃತಿಕ ಪರಂಪರೆಯನ್ನು ಸ್ತಬ್ಧಚಿತ್ರಗಳು ಅದ್ಭುತವಾಗಿ ಚಿತ್ರಿಸಿದವು. ವಿವಿಧ ರಾಜ್ಯಗಳ ಜಾನಪದ ನೃತ್ಯಗಳು, ಕಲಾ ಪ್ರಕಾರಗಳು ಮತ್ತು ಪ್ರಾದೇಶಿಕ ವೈಶಿಷ್ಟ್ಯಗಳು ಕರ್ತವ್ಯ ಪಥದಲ್ಲಿ ಮಿನುಗಿದವು. ಒಟ್ಟಾರೆಯಾಗಿ, ಈ ಬಾರಿಯ ಗಣರಾಜ್ಯೋತ್ಸವವು ಭಾರತದ ಭವ್ಯ ಇತಿಹಾಸ ಮತ್ತು ಉಜ್ವಲ ಭವಿಷ್ಯದ ನಡುವಿನ ಸುಂದರ ಕೊಂಡಿಯಾಗಿ ಮೂಡಿಬಂದಿತು.
