ನವದೆಹಲಿ: 2026ರ ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ. ಬಾಂಗ್ಲಾದೇಶದ ಪರವಾಗಿ ಬ್ಯಾಟ್ ಬೀಸಿ, ವಿಶ್ವಕಪ್ ಬಹಿಷ್ಕಾರದ ಪೊಳ್ಳು ಬೆದರಿಕೆ ಹಾಕಿದ ಪಾಕಿಸ್ತಾನಕ್ಕೆ ಐಸಿಸಿ ಈಗ ಎಚ್ಚರಿಕೆ ನೀಡಿದೆ.
ಪಿಸಿಬಿ ಅಧ್ಯಕ್ಷ ಹಾಗೂ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಐಸಿಸಿ ದ್ವಿಮುಖ ಮಾನದಂಡ ಅನುಸರಿಸುತ್ತಿದೆ ಎಂದು ಬಹಿರಂಗವಾಗಿ ಟೀಕಿಸಿದ್ದಾರೆ. ಹಿಂದೆ ಪಾಕಿಸ್ತಾನದ ಪಂದ್ಯಗಳಿಗೆ ಹೈಬ್ರಿಡ್ ಮಾದರಿ ಅನುಮತಿಸಲಾಗಿತ್ತು. ಆದರೆ ಈಗ ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಲು ಐಸಿಸಿ ನಿರಾಕರಿಸುತ್ತಿರುವುದು ಅನ್ಯಾಯ. ಬಾಂಗ್ಲಾದೇಶವು ಐಸಿಸಿಯ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾಗಿದ್ದು, ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂದು ನಖ್ವಿ ಆರೋಪ ಮಾಡಿದ್ದಾರೆ.
ಐಸಿಸಿಯ ಅಧಿಕಾರವನ್ನು ಸಾರ್ವಜನಿಕವಾಗಿ ಪ್ರಶ್ನಿಸಿರುವ ನಖ್ವಿ ಅವರ ನಡೆ ಜಾಗತಿಕ ಕ್ರಿಕೆಟ್ ಮಂಡಳಿಯನ್ನು ಕೆರಳಿಸಿದೆ. ಒಂದು ವೇಳೆ ಪಾಕಿಸ್ತಾನ ಹಠಕ್ಕೆ ಬಿದ್ದು ವಿಶ್ವಕಪ್‌ನಿಂದ ಹಿಂದೆ ಸರಿದರೆ, ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಒಂದು ವೇಳೆ ವಿಶ್ವಕಪ್‌ನಲ್ಲಿ ಆಡಲಿಲ್ಲವೆಂದರೆ, ಪಾಕಿಸ್ತಾನದ ಎಲ್ಲಾ ದ್ವಿಪಕ್ಷೀಯ ಸರಣಿಗಳನ್ನು ರದ್ದುಗೊಳಿಸುವುದರ ಜೊತೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನಿಂದ ಪಾಕಿಸ್ತಾನವನ್ನು ಹೊರಗಿಡುವುದು ಮತ್ತು ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ (PSL) ವಿದೇಶಿ ಆಟಗಾರರು ಭಾಗವಹಿಸದಂತೆ ತಡೆಯಲು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಎನ್‌ಒಸಿ (NOC) ನೀಡಬೇಡಿ ಎಂದು ಸೂಚಿಸುವುದು ಎಂದು ಐಸಿಸಿ ಎಚ್ಚರಿಸಿದೆ.
ಇಂತಹ ನಿರ್ಬಂಧಗಳು ಜಾರಿಯಾದರೆ, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಿಸಿಬಿ ಸಂಪೂರ್ಣವಾಗಿ ದಿವಾಳಿಯಾಗಲಿದೆ ಮತ್ತು ಪಾಕಿಸ್ತಾನ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಭೂಪಟದಿಂದಲೇ ಕಣ್ಮರೆಯಾಗುವ ಅಪಾಯವಿದೆ.
ಬಾಂಗ್ಲಾದೇಶದ ಪರವಾಗಿ ಇತರ ದೇಶಗಳೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ನಖ್ವಿ ಕರೆ ನೀಡಿದ್ದಾರೆ. ಬಾಂಗ್ಲಾದೇಶವನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ. ಒಂದು ದೇಶವು ಇನ್ನೊಂದು ದೇಶಕ್ಕೆ ನಿಯಮಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಅವರು ಗುಡುಗಿದ್ದಾರೆ. ಆದಾಗ್ಯೂ, ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ನಖ್ವಿ ಸ್ಪಷ್ಟಪಡಿಸಿದ್ದಾರೆ.
ಸದ್ಯಕ್ಕೆ ಪಾಕಿಸ್ತಾನ ಈ ರೀತಿ ಆಡುತ್ತಿರುವುದು ಐಸಿಸಿಯ ಕೆಂಗಣ್ಣಿಗೆ ಗುರಿಯಾಗಿರುವ ಕಾರಣ ಅದರ ಕ್ರಿಕೆಟ್ ಭವಿಷ್ಯವು ಏನಾಗುತ್ತದೆ ಎಂದು ಕಾದು ನೋಡಬೇಕಿದೆ.





