ಚೆನ್ನೈ, ಫೆ. 27: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣ (ಚೆಪಾಕ್) ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2026ರ ಸೂಪರ್-8 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಿಡಿಲಿನಂತೆ ಮಿಂಚಿದರು. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಕೇವಲ 23 ರನ್‌ಗಳಲ್ಲಿ ಅರ್ಧಶತಕ ಬಾರಿಸಿ ತಂಡವನ್ನು ಭಾರೀ ಮೊತ್ತದತ್ತ ಕೊಂಡೊಯ್ದರು. ತಮ್ಮ ಅದ್ಭುತ ಇನಿಂಗ್ಸ್ ಬಳಿಕ ಮೈದಾನದಿಂದಲೇ ಗೆಳತಿ ಮಹಿಕಾ ಶರ್ಮ ಅವರಿಗೆ ಫ್ಲೈಯಿಂಗ್ ಕಿಸ್ ನೀಡಿದ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಅಬ್ಬರದ ಆಟವಾಡಿತು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ವೇಗವಾಗಿ 55 ರನ್ ಗಳಿಸಿ ಭದ್ರ ಅಡಿಪಾಯ ಹಾಕಿದರು. ನಂತರ ಮಧ್ಯಮ ಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿದು ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು. ಅವರು ಕ್ರೀಸ್‌ಗೆ ಬಂದ ಕ್ಷಣದಿಂದಲೇ ಬಿರುಸಿನ ಶಾಟ್ಸ್‌ಗಳನ್ನು ಆಡುತ್ತ ಜಿಂಬಾಬ್ವೆ ಬೌಲರ್‌ಗಳ ಮೇಲೆ ಒತ್ತಡ ಹೇರುತ್ತಿದ್ದರು.
ಇನಿಂಗ್ಸ್‌ನ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪಾಂಡ್ಯ ಅರ್ಧಶತಕ ಪೂರೈಸಿದರು. ಅವರ ಬ್ಯಾಟ್‌ನಿಂದ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಯುತ್ತಿದ್ದಾಗ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಮಹಿಕಾ ಶರ್ಮಾ ಚಪ್ಪಾಳೆ ತಟ್ಟುತ್ತಾ ಅವರನ್ನು ಹುರಿದುಂಬಿಸುತ್ತಿದ್ದ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಯಿತು. ಅರ್ಧಶತಕ ಪೂರೈಸಿದ ಕ್ಷಣದಲ್ಲೇ ಪಾಂಡ್ಯ ಗ್ಯಾಲರಿಯತ್ತ ಮುಖ ಮಾಡಿ ಫ್ಲೈಯಿಂಗ್ ಕಿಸ್ ನೀಡಿದ್ದು, ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ಪಂದ್ಯದ ನಂತರ ಮಾತನಾಡಿದ ಪಾಂಡ್ಯ, “ತುಂಬಾ ಸಂತೋಷವಾಗಿದೆ. ಆರಂಭದಲ್ಲಿ ನಾನು ಚೆಂಡನ್ನು ತುಂಬಾ ಬಲವಾಗಿ ಹೊಡೆಯಲು ಪ್ರಯತ್ನಿಸುತ್ತಿದ್ದೇನೆ ಎಂಬುದು ಅರಿವಾಯಿತು. ನಂತರ ಸಮಯಕ್ಕೆ ಸರಿಯಾಗಿ ಹೊಡೆಯಲು ಗಮನಹರಿಸಿದೆ. ಅದಾದಮೇಲೆ ರನ್‌ಗಳು ಸ್ವಾಭಾವಿಕವಾಗಿ ಬಂದವು. ನಾವು ಎಲ್ಲರೂ ಮುಂದಿನ ಪಂದ್ಯವನ್ನು ಗಮನದಲ್ಲಿಟ್ಟುಕೊಂಡೇ ಆಡುತ್ತಿದ್ದೇವೆ,” ಎಂದು ಹೇಳಿದರು.
ತಮ್ಮ ಬೌಲಿಂಗ್ ಕುರಿತು ಮಾತನಾಡಿದ ಅವರು, “ನನಗೆ ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡುವುದು ಇಷ್ಟ. ದೇವರು ದಯೆ ತೋರಿಸಿದ್ದಾನೆ. ಇನ್‌ಸ್ವಿಂಗ್ ಹಾಗೂ ಔಟ್‌ಸ್ವಿಂಗ್ ಎರಡನ್ನೂ ಎಸೆಯಬಲ್ಲೆ. ತಂಡಕ್ಕೆ ಕೊಡುಗೆ ನೀಡುತ್ತಿರುವುದು ಸಂತೋಷಕರ,” ಎಂದು ಹೇಳಿದರು.
ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 256 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಇದು ಟಿ20 ವಿಶ್ವಕಪ್ ಸೂಪರ್-8 ಹಂತದಲ್ಲಿ ಗಮನಾರ್ಹ ಸ್ಕೋರ್ ಆಗಿದೆ. ತಿಲಕ್ ವರ್ಮಾ 44 ರನ್, ಇಶಾನ್ ಕಿಶನ್ 38, ಸೂರ್ಯಕುಮಾರ್ 33 ಹಾಗೂ ಸಂಜು ಸ್ಯಾಮ್ಸನ್ 24 ರನ್‌ಗಳೊಂದಿಗೆ ತಂಡದ ಮೊತ್ತ ಹೆಚ್ಚಿಸಲು ಸಹಕರಿಸಿದರು.
𝐂𝐨𝐦𝐞𝐭𝐡 𝐭𝐡𝐞 𝐦𝐨𝐦𝐞𝐧𝐭, 𝐜𝐨𝐦𝐞𝐭𝐡 𝐇𝐚𝐫𝐝𝐢𝐤 𝐏𝐚𝐧𝐝𝐲𝐚. 🤌
A breathtaking burst at the death by him, powered #TeamIndia past 250 with authority! 🙌
ICC Men’s #T20WorldCup 👉 SUPER 8, #INDvZIM | LIVE NOW ➡️ https://t.co/vIdZg7mGmy pic.twitter.com/LazrvENuz8
— Star Sports (@StarSportsIndia) February 26, 2026
256 ರನ್‌ಗಳ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ ಆರಂಭದಲ್ಲಿ ಸಂಕಷ್ಟಕ್ಕೀಡಾದರೂ ಕೊನೆಯವರೆಗೂ ಹೋರಾಟ ನಡೆಸಿತು. ಬೆನೆಟ್ 97 ರನ್‌ಗಳ ಅಜೇಯ ಇನಿಂಗ್ಸ್ ಆಡಿದರೂ, ಉಳಿದ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗದೆ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್‌ಗಳಷ್ಟೇ ಗಳಿಸಿತು. ಭಾರತದ ಪರ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದು ಪ್ರಮುಖ ಪಾತ್ರವಹಿಸಿದರು.
ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಅವರ ಬ್ಯಾಟಿಂಗ್ ಮಾತ್ರವಲ್ಲದೆ ಮೈದಾನದಲ್ಲಿನ ಆತ್ಮವಿಶ್ವಾಸ ಹಾಗೂ ಸಂಭ್ರಮಾಚರಣೆ ಅಭಿಮಾನಿಗಳ ಮನಗೆದ್ದಿತು.
