ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧದ (ENG vs IND) ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಭಾರತ ತಂಡಕ್ಕೆ ಗಾಯಾಳುಗಳ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಂಡದ ಸ್ಟಾರ್ ವೇಗದ ಬೌಲರ್‌ಗಳಾದ ಆಕಾಶ್ ದೀಪ್ ಮತ್ತು ಅರ್ಶ್‌ದೀಪ್ ಸಿಂಗ್ ಗಾಯಗೊಂಡಿರುವ ಬೆನ್ನಲ್ಲೇ, ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕೂಡ ಗಂಭೀರ ಗಾಯಕ್ಕೆ ಒಳಗಾಗಿದ್ದು, ಸರಣಿಯಿಂದಲೇ ಹೊರಬೀಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಗಾಯಗಳ ಸರಮಾಲೆ ತಂಡದ ಯೋಜನೆಗೆ ಗಂಭೀರ ಹೊಡೆತ ನೀಡಿದೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ನಿತೀಶ್ ರೆಡ್ಡಿ ಭಾನುವಾರ ಜಿಮ್‌ನಲ್ಲಿ ತರಬೇತಿ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ಸ್ಕ್ಯಾನಿಂಗ್ ವರದಿಯಲ್ಲಿ ಅವರ ಮೊಣಕಾಲಿನ ಅಸ್ಥಿರಜ್ಜು ಗಂಭೀರವಾಗಿ ಹಾನಿಗೊಳಗಾಗಿರುವುದು ದೃಢಪಟ್ಟಿದೆ. ಈ ಗಾಯದಿಂದಾಗಿ ನಿತೀಶ್ ರೆಡ್ಡಿ ಉಳಿದ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ರಿಷಭ್ ಪಂತ್, ಆಕಾಶ್ ದೀಪ್, ಮತ್ತು ಅರ್ಶ್‌ದೀಪ್ ಸಿಂಗ್ ಅವರಂತಹ ಪ್ರಮುಖ ಆಟಗಾರರ ಗಾಯಗಳಿಂದ ಈಗಾಗಲೇ ತೊಂದರೆಯಲ್ಲಿರುವ ಭಾರತ ತಂಡಕ್ಕೆ ಈ ಘಟನೆ ಮತ್ತಷ್ಟು ಒತ್ತಡ ಹೇರಿದೆ. ತಂಡದ ಸೀಮ್ ಬೌಲಿಂಗ್ ಆಯ್ಕೆಯನ್ನು ಬಲಪಡಿಸಲು ಅನ್ಶುಲ್ ಕಾಂಬೋಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ನಿತೀಶ್ ರೆಡ್ಡಿ ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ, ಆದರೆ ಬರ್ಮಿಂಗ್ಹ್ಯಾಮ್‌ನ ಎರಡನೇ ಟೆಸ್ಟ್‌ನಲ್ಲಿ ಅವಕಾಶ ಪಡೆದರು. ಆ ಪಂದ್ಯದಲ್ಲಿ ಕೊಡುಗೆ ನೀಡದಿದ್ದರೂ, ಮೂರನೇ ಟೆಸ್ಟ್‌ನಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ್ದರು.. ಲಾರ್ಡ್ಸ್ ಟೆಸ್ಟ್‌ನ ಮೊದಲ ದಿನ ರಿಷಭ್ ಪಂತ್‌ಗೆ ಕೈ ಬೆರಳಿನ ಗಾಯವಾಗಿತ್ತು. ಅವರ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಆದರೆ, ರಿಷಭ್‌ನ ಗಾಯದಿಂದ ಚೇತರಿಕೆಯಾಗುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ನಾಲ್ಕನೇ ಟೆಸ್ಟ್‌ನಲ್ಲಿ ಆಡುವುದು ಖಚಿತವಿಲ್ಲ. ಒಟ್ಟಾರೆ, ಗಾಯಾಳುಗಳ ಸರಮಾಲೆ ತಂಡದ ತಯಾರಿಯನ್ನು ತೀವ್ರವಾಗಿ ತೊಂದರೆಗೊಳಿಸಿದೆ.