ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತೀಯ ಕ್ರಿಕೆಟ್ ಆಟಗಾರರಿಗೆ ಬಿಸಿಸಿಐ ಬಹುಮಾನ ಘೋಷಣೆ ಮಾಡಿದೆ. ಟೀಂ ಇಂಡಿಯಾಗೆ ಒಟ್ಟಾರೆ ಘೋಷಣೆ ಮಾಡಿರುವ ಹಣ 58 ಕೋಟಿ. ಟ್ರೋಫಿ ಗೆದ್ದ ತಂಡದಲ್ಲಿದ್ದ ಎಲ್ಲ 15 ಆಟಗಾರರಿಗೆ ತಲಾ 3 ಕೋಟಿ ರೂ. ಸಿಗಲಿದೆ.
ಹೀಗಾಗಿ ಒಬ್ಬೊಬ್ಬ ಆಟಗಾರರಿಗೂ ತಲಾ 1 ಕೋಟಿ 33 ಲಕ್ಷ + 3 ಕೋಟಿ + 30 ಲಕ್ಷ ರೂ. ಸಿಗಲಿದೆ. ಅಂದ್ರೆ ಒಬ್ಬೊಬ್ಬ ಆಟಗಾರರನಿಗೆ ತಲಾ 4 ಕೋಟಿ 63 ಲಕ್ಷ ರೂ. ಸಿಗಲಿದೆ. ಹೇಗೆ ಅನ್ನೋದನ್ನ ಡೀಟೈಲ್ ಆಗಿ ನೋಡೋದಾದ್ರೆ..
ಕ್ಯಾಪ್ಟನ್ ರೋಹಿತ್ ಶರ್ಮಾ, ವೈಸ್ ಕ್ಯಾಪ್ಟನ್ ಶುಭಮನ್ ಗಿಲ್, ಕೋಚ್ ಗೌತಂ ಗಂಭೀರ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ಅವರಿಗಷ್ಟೇ ಅಲ್ಲ, ಎರಡು ಪಂದ್ಯಗಳನ್ನಷ್ಟೇ ಆಡಿದ್ದ ಹರ್ಷಿತ್ ರಾಣಾ, ಒಂದೂ ಪಂದ್ಯ ಆಡದೇ ಇದ್ದ ಅರ್ಶ್‌ದೀಪ್ ಸಿಂಗ್, ರಿಷಬ್ ಪಂತ್, ವಾಷಿಂಗ್ಟನ್ ಸುಂದರ್ ಅವರಿಗೂ ಕೂಡಾ ಒಬ್ಬೊಬ್ಬರಿಗೂ 3 ಕೋಟಿ ಸಿಗಲಿದೆ. ಇದು ಬಿಸಿಸಿಐ ನೀಡುವ ಬಹುಮಾನದ ಹಣ.
ಇನ್ನು ತಂಡದ ಸಹಾಯಕ ಕೋಚ್ ಸಿಬ್ಬಂದಿ, ಮ್ಯಾನೇಜರುಗಳು, ಸಪೋರ್ಟಿಂಗ್ ಸ್ಟಾಫಿಗೆ ಕೂಡಾ ತಲಾ 50 ಲಕ್ಷ ರೂಪಾಯಿ ಸಿಗಲಿದೆ.
ಕಳೆದ ವರ್ಷ ಟಿ-20 ವಿಶ್ವಕಪ್ ಗೆದ್ದಾಗ ಇಡೀ ತಂಡಕ್ಕೆ 125 ಕೋಟಿ ರೂಪಾಯಿ ಘೋಷಣೆ ಮಾಡಲಾಗಿತ್ತು. ಆಗ ತಂಡದ ಕೋಚ್ ಸಿಬ್ಬಂದಿಗೆ ಇದೇ ರೀತಿ ಕಡಿಮೆ ಹಣ ಘೋಷಣೆ ಮಾಡಿದ್ದಾಗ ಅದನ್ನು ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲರೂ ವಿರೋಧಿಸಿದ್ದರು. ಬಿಸಿಸಿಐ ಕೊಡದೇ ಹೋದರೆ, ಆಟಗಾರರೇ ತಮ್ಮ ಹಣದಲ್ಲಿ ಬಹುಮಾನ ಹಂಚುವುದಾಗಿ ಹಾಗೂ ಅದನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದರು. ಕೊನೆಗೆ ಆಟಗಾರರ ಹಠಕ್ಕೆ ಮಣಿದು ಎಲ್ಲರಿಗೂ ಒಂದೇ ರೀತಿಯ ಬಹುಮಾನ ವಿತರಿಸಲಾಗಿತ್ತು. ಆದರೆ ಈ ಬಾರಿ ಏನೂ ಹಾಗಾಗಿಲ್ಲ.
ಇದಲ್ಲದೆ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಕ್ಕೆ ಬರುವ ಎಲ್ಲ 20 ಕೋಟಿ ಹಣವನ್ನೂ ತಂಡದ 15 ಆಟಗಾರರಿಗೆ ಹಂಚಲಾಗುತ್ತದೆ. ಅಂದ್ರೆ 15 ಆಟಗಾರರಿಗೆ 20 ಕೋಟಿ ಹಣ ಸಿಗಲಿದೆ. ಇದರ ಜೊತೆಗೆ ತಂಡದ ಆಟಗಾರರಿಗೆ ಪಂದ್ಯವೊಂದಕ್ಕೆ ಕೊಡುವ ಹಣವೂ ಪ್ರತ್ಯೇಕವಾಗಿ ಸಿಗಲಿದೆ.
ಇವರಷ್ಟೇ ಅಲ್ಲದೆ, ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ 30 ಲಕ್ಷ ಹಾಗೂ ಆಯ್ಕೆ ಸಮಿತಿಯಲ್ಲಿದ್ದ ಎಲ್ಲರಿಗೂ ತಲಾ 25 ಲಕ್ಷ ರೂ. ಬಹುಮಾನವಾಗಿ ಸಿಗಲಿದೆ.
ಇದರ ಜೊತೆಗೆ ಒಂದು ಏಕದಿನ ಪಂದ್ಯಕ್ಕೆ ತಲಾ 6 ಲಕ್ಷ ರೂ.ನಂತೆ ಪಂದ್ಯದ ಸಂಭಾವನೆಯಾಗಿ ಸಿಗಲಿದೆ. ಅಲ್ಲಿಗೆ ಬಿಸಿಸಿಐ ಬಹುಮಾನ 3 ಕೋಟಿ + ಚಾಂಪಿಯನ್ಸ್ ಟ್ರೋಫಿ ಬಹುಮಾನದ ಹಣ 1 ಕೋಟಿ 33 ಲಕ್ಷ + 5 ಪಂದ್ಯಗಳ ಒಟ್ಟಾರೆ ಸಂಭಾವನೆ 30 ಲಕ್ಷವೂ ಸೇರಿ, ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿದ್ದ ಪ್ರತಿ ಆಟಗಾರರೂ ಒಟ್ಟಾರೆ 4 ಕೋಟಿ 63 ಲಕ್ಷ ರೂ. ಹಣ ಪಡೆಯಲಿದ್ಧಾರೆ.