ನವದೆಹಲಿ: ಐಪಿಎಲ್ 2026ರ ಪ್ಲೇಆಫ್ ಹಂತಕ್ಕೆ ಕೇವಲ ಕೆಲವೇ ದಿನಗಳು ಬಾಕಿಯಿರುವಾಗ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಅವರು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಬಗ್ಗೆ ಮಹತ್ವದ ಭವಿಷ್ಯ ನುಡಿದಿದ್ದಾರೆ. ಟಾಪ್ ಆರ್ಡರ್‌ನ ಮೂವರು ಬ್ಯಾಟ್ಸಮನ್‌ಗಳು ಫಾರ್ಮ್‌ನಲ್ಲಿದ್ದರೆ, ಈ ಬಾರಿ SRHಗೆ ಚಾಂಪಿಯನ್ ಪಟ್ಟ ಖಚಿತ ಎಂದು ಅವರು ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲೀಗ್ ಹಂತದ ಕೊನೆಯ ಪಂದ್ಯದ ಬಳಿಕ ಮಾತನಾಡಿದ ಅಕ್ಷರ್, ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್‌ಅಪ್ ಈ ಸೀಸನ್‌ನ ಅತ್ಯಂತ ಅಪಾಯಕಾರಿ ವಿಭಾಗವಾಗಿದೆ ಎಂದರು. ಹೆನ್ರಿಕ್ ಕ್ಲಾಸೆನ್, ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಅವರ ಅಬ್ಬರದ ಪ್ರದರ್ಶನ ತಂಡಕ್ಕೆ ಹೊಸ ಶಕ್ತಿ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಪ್ಲೇಆಫ್ಸ್‌ನಲ್ಲಿ ಆ ಮೂವರು ಬ್ಯಾಟ್ಸ್‌ಮನ್‌ಗಳು ಕ್ಲಿಕ್ ಆದರೆ ಎಸ್‌ಆರ್‌ಹೆಚ್ ತಂಡವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಈ ಬಾರಿ ಟ್ರೋಫಿ ಗೆಲ್ಲುವ ಸಾಮರ್ಥ್ಯ ಅವರಲ್ಲಿದೆ” ಎಂದು ಅಕ್ಷರ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಸೀಸನ್‌ನಲ್ಲಿ ಹೆನ್ರಿಕ್ ಕ್ಲಾಸೆನ್, ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಮೂವರೂ 500ಕ್ಕೂ ಹೆಚ್ಚು ರನ್ ಗಳಿಸಿ ಮಿಂಚಿದ್ದಾರೆ. ಪವರ್‌ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಅವರ ಬ್ಯಾಟಿಂಗ್ ಎದುರಾಳಿ ಬೌಲರ್‌ಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇತ್ತೀಚೆಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಎಸ್‌ಆರ್‌ಹೆಚ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 55 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಗೆಲುವಿನ ಮೂಲಕ ತಂಡ ಪ್ಲೇಆಫ್ ಪ್ರವೇಶವನ್ನು ಅಧಿಕೃತವಾಗಿ ಖಚಿತಪಡಿಸಿಕೊಂಡಿತು.
ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನು ಆಡಿದ ಹೈದರಾಬಾದ್ ತಂಡ 9 ಪಂದ್ಯಗಳಲ್ಲಿ ಗೆದ್ದು, 5 ಪಂದ್ಯಗಳಲ್ಲಿ ಸೋಲು ಕಂಡು 18 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಆದರೂ ಕಡಿಮೆ ನೆಟ್ ರನ್‌ರೇಟ್ ಕಾರಣದಿಂದ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಉತ್ತಮ ರನ್‌ರೇಟ್‌ನೊಂದಿಗೆ ಮೇಲಿನ ಸ್ಥಾನದಲ್ಲಿವೆ.
ಎಸ್‌ಆರ್‌ಹೆಚ್ ತಂಡವೇ ಅತ್ಯಂತ ಸಮತೋಲನ ಹೊಂದಿದ ತಂಡವಾಗಿದೆ. ಬಲಿಷ್ಠ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ವಿಭಾಗವೂ ಸಮಯಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಇನ್ನು ಪ್ಲೇಆಫ್ ವೇಳಾಪಟ್ಟಿಯತ್ತ ಗಮನ ಹರಿಸಿದರೆ, ಮೇ 26ರಂದು ಕ್ವಾಲಿಫೈಯರ್-1 ಪಂದ್ಯ ನಡೆಯಲಿದೆ. ಮೇ 27ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು Rajasthan Royals ವಿರುದ್ಧ ಕಣಕ್ಕಿಳಿಯಲಿದೆ.
