ಐಪಿಎಲ್ನಲ್ಲಿ ಆಟಗಾರರು ರಾತ್ರೋರಾತ್ರಿ ಸ್ಟಾರ್ ಆಗ್ತಾರೆ. ಒಂದು ಮ್ಯಾಚ್ ಸಾಕು. ಆದರೆ.. ಹಾಗೆ ರಾತ್ರೋರಾತ್ರಿ ಸ್ಟಾರ್ ಆಗೋಕೆ ಹಗಲು ರಾತ್ರಿ ಕಷ್ಟಪಟ್ಟಿರ್ತಾರೆ. ಅದು ವಾಸ್ತವ. ಅಶುತೋಷ್ ಶರ್ಮಾ ಕೂಡಾ ಈ ಕೆಟಗರಿಗೆ ಸೇರಿದ ಹುಡುಗ. ಅಶುತೋಷ್ ಶರ್ಮಾ ಎಂಬ ಆಟಗಾರ, ಈಗ ಲಕ್ನೋ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಬಿರುಗಾಳಿಯ ಆಟವಾಡಿ, ಸ್ಟಾರ್ ಆಗಿದ್ದಾರೆ.
ಪ್ರತಿಯೊಂದು ಗೆಲುವಿನ ಹಿಂದೆಯೂ ಕಷ್ಟ ಇರುತ್ತದೆ. ಬಹುಶಃ ಸುಖವಾಗಿದ್ದುಕೊಂಡು ಸೆಲಬ್ರಿಟಿ ಆದವರು ಇಲ್ಲವೇ ಇಲ್ಲ ಎನ್ನಬೇಕು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಟೋ ಡ್ರೈವರ್ ಮಗ ವಿಘ್ನೇಶ್ ಹೇಗೆ ಹೀರೋ ಆದರೋ.. ಹಾಗೆಯೇ ಅಶುತೋಷ್ ಶರ್ಮಾ ಕೂಡಾ ಹೀರೋ ಆದವರು.
ಅಶುತೋಷ್ ಶರ್ಮಾ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಮಧ್ಯಪ್ರದೇಶದ ಮೊರೆನಾ ಅನ್ನೋ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಅಶುತೋಷ್ , 8ನೇ ವಯಸ್ಸಿಗೆ ಮನೆ ಬಿಟ್ಟು ಇಂಧೋರ್ ಸೇರಿದ ಅಶುತೋಷ್ ಅವರು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು, ಕ್ರಿಕೆಟ್ ಸ್ಟೇಡಿಯಮ್ಮಿನಲ್ಲಿ ಬಾಲ್ ಬಾಯ್ ಆಗಿ ಕೆಲಸ ಮಾಡುತ್ತಾ.. ಲೋಕಲ್ ಮ್ಯಾಚುಗಳಲ್ಲಿ ಅಂಪೈರಿಂಗ್ ಮಾಡ್ತಾ ಇದ್ದವರು. ಅಂಪೈರಿಂಗ್ ಮಾಡಿದರೆ ಮಧ್ಯಾಹ್ನದ ಊಟ ಗ್ಯಾರಂಟಿ ಅನ್ನೋದೊಂದೇ ಉದ್ದೇಶವಾಗಿತ್ತು.
ಹೀಗೆ ಬಾಲ್ ಬಾಯ್ ಆಗಿ, ಪಂಜಾಬ್ ಕಿಂಗ್ಸ್ ತಂಡದ ಟ್ರಯಲ್ಸ್ಗೆ ಹೋಗಿದ್ದವರಿಗೆ, ಇನ್ನೊಂದು ದಿನ ಇರು ಎಂಬ ಸೂಚನೆ ಬಂದಂತೆ. ಆಗ ಆಗಿದ್ದಾಗಲಿ ಎಂದು ಉಳಿದುಕೊಂಡ ಅಶುತೋಶ್ ಅವರಿಗೆ ಪಂಜಾಬ್ ಕಿಂಗ್ಸ್ ತಂಡದ ಟೀಂ ಬಾಗಿಲು ಓಪನ್ ಆಯ್ತು.
ಇನ್ನು ದೇಸಿ ಪಂದ್ಯಗಳಲ್ಲಿ ಅದ್ಭುತ ಆಟ ಆಡ್ತಾ ಇದ್ದ ಅಶುತೋಷ್ ಅವರಿಗೆ ಮಧ್ಯಪ್ರದೇಶ ರಣಜಿ ತಂಡದಲ್ಲಿ ಸ್ಥಾನ ಸಿಗದೆ ಹೋದಾಗ ರೈಲ್ವೇಸ್ ಟೀಂಗೆ ಶಿಫ್ಟ್ ಆಗ್ತಾರೆ. ಪಂಜಾಬ್, ಕೊಲ್ಕತ್ತಾ ತಂಡದ ಪರ ಆಡಿದರೂ ರೆಗ್ಯುಲರ್ ಆಗಿ ತಂಡದಲ್ಲಿ ಸ್ಥಾನ ಸಿಕ್ಕದೇ ಹೋದಾಗ ಖಿನ್ನತೆಗೆ ಜಾರ್ತಾರೆ.
ಕ್ರಿಕೆಟ್ ಅಂತಾ ಬಂದ್ರೆ, ಅಶುತೋಶ್ ಅವರ ಪ್ಲಸ್ಸು ಮೈನಸ್ಸು ಗುರುತಿಸಿ ಬೆಳೆಸಿದ್ದು ತುಂಬಿದ್ದು ಸಂಜಯ್ ಬಂಗಾರ್ ಆದರೆ, ಆತ್ಮವಿಶ್ವಾಸ ತುಂಬಿದ್ದು ಶಿಖರ್ ಧವನ್. ಅದೇ ಕಾರಣಕ್ಕೆ ಈಗ ಲಕ್ನೋ ಜೈಂಟ್ಸ್ ವಿರುದ್ಧದ ಮ್ಯಾಚ್ ವಿನ್ನರ್ ಪ್ರಶಸ್ತಿಯನ್ನ ಶಿಖರ್ ಧವನ್ ಅವರಿಗೇ ಅರ್ಪಿಸಿದ್ದಾರೆ ಅಶುತೋಷ್.
ಕಳೆದ ಸೈಯ್ಯದ್ ಅಲಿ ಮುಷ್ತಾಕ್ ಟ್ರೋಫಿಯಲ್ಲಿ ಯುವರಾಜ್ ಸಿಂಗ್ ಅವರ ವೇಗದ ಅರ್ಧಶತಕ ದಾಖಲೆ ಬ್ರೇಕ್ ಮಾಡಿದ್ದು ಅಶುತೋಷ್ ಅವರ ಕ್ರಿಕೆಟ್ ಬದುಕಿನ ಟರ್ನಿಂಗ್ ಪಾಯಿಂಟ್ ಆಗುತ್ತೆ. 11 ಬಾಲುಗಳಲ್ಲೇ ಸಿಡಿಸಿದ ಹಾಫ್ ಸೆಂಚುರಿ, ಅಶುತೋಷ್ ಅವರ ಲೈಫಿನ ಟರ್ನಿಂಗ್ ಪಾಯಿಂಟ್ ಆಗಿ, ಐಪಿಎಲ್ ಬಿಡ್ಡಿಂಗಿನಲ್ಲಿ ಒಳ್ಳೆಯ ಡಿಮ್ಯಾಂಡ್ ಬರುತ್ತೆ.
ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಹೇಳ್ಬೇಕು. ಏನಂದ್ರೆ, ಬಿಡ್ಡಿಂಗ್ ಆದಾಗ ಇದೇ ಅಶುತೋಷ್ ಅವರನ್ನ ಖರೀದಿ ಮಾಡೋಕೆ ಆರ್ಸಿಬಿ ಕೂಡಾ ಬಿಡ್ಡಿಂಗ್ ಮಾಡಿತ್ತು.
ಆದರೆ ಡೆಲ್ಲಿ ಮತ್ತು ಪಂಜಾಬ್ ಪೈಪೋಟಿಗೆ ಇಳಿದ ಕೂಡ್ಲೇ ಆರ್ಸಿಬಿ ಹಿಂದೆ ಸರೀತು. ಈಗ ನೋಡಿದ್ರೆ, ಅವರು ಅಸಾಧ್ಯವಾದ ಗೆಲುವನ್ನ ಸಾಧಿಸಿ ತೋರಿಸಿದ್ದಾರೆ.
210 ರನ್ ಗುರಿ ಬೆನ್ನಟ್ಟುವಾಗ ಒಂದು ಹಂತದಲ್ಲಿ 65 ರನ್ನಿಗೆ 5 ವಿಕೆಟ್ ಕಳ್ಕೊಂಡಿತ್ತು ಡೆಲ್ಲಿ. ಮೊದಲ ಓವರಿನಲ್ಲೇ ಎರಡು ವಿಕೆಟ್ ಬಿದ್ದ ಕಾರಣ, ರನ್ ರೇಟ್ ಕೂಡಾ ಬಿದ್ದಿತ್ತು. ಆದರೆ ಸ್ಟಬ್ಸ್, ವಿಪ್ರಜ್ ಜೊತೆ ಒಳ್ಳೆಯ ಜೊತೆಯಾಟ ಸಂಘಟಿಸಿದ ಅಶುತೋಷ್ , ಕೊನೆಯ ಓವರಿನಲ್ಲಿ ಸಿಕ್ಸರ್ ಸಿಡಿಸಿ ಇಂಪಾಸಿಬಲ್ ಗೆಲುವನ್ನ ಸಾಧ್ಯ ಮಾಡಿ ತೋರಿಸಿದ್ದಾರೆ. ಟೋಟಲ್ಲಾಗಿ 31 ಬಾಲುಗಳಲ್ಲಿ ಅಜೇಯ 66 ರನ್ ಸಿಡಿಸಿ, ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಅಂದಹಾಗೆ ಡೆಲ್ಲಿ ಈ ಮ್ಯಾಚ್ನ್ನ ಕೆಎಲ್ ರಾಹುಲ್ ಅವರಿಲ್ಲದೇ ಆಡಿ ಗೆದ್ದಿದೆ ಅನ್ನೋದು ವಿಶೇಷ.