ಮಹಾಶಿವರಾತ್ರಿಯು ಕೇವಲ ಒಂದು ಹಬ್ಬವಲ್ಲ, ಅದು ಶಿವ ಮತ್ತು ಶಕ್ತಿಯ ಮಿಲನದ ಪವಿತ್ರ ದಿನ. ನಿಷ್ಕಲ್ಮಶ ಮನಸ್ಸಿನಿಂದ ಈ ದಿನ ಮಹಾದೇವನನ್ನು ಆರಾಧಿಸುವುದರಿಂದ ಜೀವನದ ಸಕಲ ದೋಷಗಳು ನಿವಾರಣೆಯಾಗಿ, ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ದೃಢ ನಂಬಿಕೆಯಿದೆ. ಆಧ್ಯಾತ್ಮಿಕ ಉನ್ನತಿ ಮತ್ತು ಮಾನಸಿಕ ಶಾಂತಿಗಾಗಿ ಈ ದಿನ ಕೆಳಗಿನ ಮಂತ್ರಗಳನ್ನು ಪಠಿಸುವುದು ಅತ್ಯಂತ ಶುಭ.
ಇಂದು ಪಠಿಸಬೇಕಾದ ಶಕ್ತಿಶಾಲಿ ಮಂತ್ರಗಳು
1. ರುದ್ರ ಮಂತ್ರ: “ಓಂ ನಮೋ ಭಗವತೇ ರುದ್ರಾಯ” ಈ ಮಂತ್ರವು ಆತ್ಮವಿಶ್ವಾಸದ ಸಂಕೇತ. ಮಹಾಶಿವರಾತ್ರಿಯಂದು ಇದನ್ನು ಜಪಿಸುವುದರಿಂದ ಮಾನಸಿಕ ಧೈರ್ಯ ಹೆಚ್ಚುತ್ತದೆ ಮತ್ತು ಭಯದ ಆಲೋಚನೆಗಳು ದೂರವಾಗುತ್ತವೆ. ಇಷ್ಟಾರ್ಥ ಸಿದ್ಧಿಗಾಗಿ “ಓಂ ನಮೋ ಭಗವತೇ ರುದ್ರಾಯ ನಮಃ” ಎಂದು ಪಠಿಸುವುದು ಉತ್ತಮ.
2. ಶಿವ ಗಾಯತ್ರಿ ಮಂತ್ರ: “ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದ್ಯಾತ್” ಜ್ಞಾನದ ಮಾರ್ಗವನ್ನು ಪ್ರಕಾಶಗೊಳಿಸಲು ಈ ಮಂತ್ರ ಸಹಕಾರಿ. ಇದು ಬುದ್ಧಿಶಕ್ತಿಯನ್ನು ಚುರುಕುಗೊಳಿಸಿ ಆಲೋಚನೆಗಳನ್ನು ಶುದ್ಧೀಕರಿಸುತ್ತದೆ. ಜೀವನದಲ್ಲಿ ಸುಖ-ಸಮೃದ್ಧಿ ಬಯಸುವವರು ಈ ಮಂತ್ರವನ್ನು ತಪ್ಪದೇ ಪಠಿಸಬೇಕು.
3. ವಿದ್ಯಾರ್ಥಿಗಳಿಗಾಗಿ ವಿಶೇಷ ಮಂತ್ರ: “ಓಂ ಐಂ ಹ್ರೀಂ ಸರಸ್ವತ್ಯೈ ನಮಃ” ಶಿಕ್ಷಣ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಬಯಸುವ ವಿದ್ಯಾರ್ಥಿಗಳು ಈ ಮಂತ್ರವನ್ನು 21 ಬಾರಿ ಜಪಿಸಬೇಕು. ಇದು ಏಕಾಗ್ರತೆಯನ್ನು ಹೆಚ್ಚಿಸಿ ವಿದ್ಯಾಭ್ಯಾಸದಲ್ಲಿ ಪ್ರಗತಿ ನೀಡುತ್ತದೆ.
4. ಮಹಾಮೃತ್ಯುಂಜಯ ಮಂತ್ರ: “ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ | ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್ ||” ಅಕಾಲಿಕ ಮರಣದ ಭಯ ಹೋಗಲಾಡಿಸಲು ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಮುಕ್ತಿ ಪಡೆಯಲು ಈ ಮಂತ್ರವು ರಾಮಬಾಣ. ಶಿವರಾತ್ರಿಯಂದು 108 ಬಾರಿ ಇದನ್ನು ಜಪಿಸುವುದರಿಂದ ಶಿವನ ರಕ್ಷಾ ಕವಚ ನಿಮ್ಮ ಸುತ್ತ ನಿರ್ಮಾಣವಾಗುತ್ತದೆ.
5. ಪಂಚಾಕ್ಷರಿ ಮಂತ್ರ: “ಓಂ ನಮಃ ಶಿವಾಯ” ಸ್ಕಂದ ಪುರಾಣದ ಪ್ರಕಾರ, ಈ ಮಂತ್ರವು ಸಕಲ ಪಾಪಗಳನ್ನು ನಾಶಪಡಿಸಿ ಮೋಕ್ಷವನ್ನು ನೀಡುತ್ತದೆ. ಈ ಮಂತ್ರ ಜಪಿಸುವವರಿಗೆ ಬೇರೆ ಯಾವುದೇ ಯಜ್ಞ ಅಥವಾ ತೀರ್ಥಯಾತ್ರೆಯ ಅಗತ್ಯವಿರುವುದಿಲ್ಲ.
ಮಂತ್ರ ಪಠಣದ ನಿಯಮಗಳು
ಮಂತ್ರಗಳ ಪೂರ್ಣ ಫಲ ಸಿಗಬೇಕೆಂದರೆ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ:
-
ದಿಕ್ಕು: ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ಜಪಿಸಿ.
-
ಸ್ಥಳ: ಶಿವ ದೇವಾಲಯ ಅಥವಾ ಮನೆಯಲ್ಲಿ ಸ್ವಚ್ಛ ಹಾಗೂ ಏಕಾಂತ ಸ್ಥಳವನ್ನು ಆರಿಸಿಕೊಳ್ಳಿ.
-
ರುದ್ರಾಕ್ಷ ಮಾಲೆ: ಶಿವನಿಗೆ ಪ್ರಿಯವಾದ ರುದ್ರಾಕ್ಷ ಮಾಲೆಯನ್ನು ಬಳಸಿ ಕನಿಷ್ಠ 108 ಬಾರಿ ಜಪ ಮಾಡುವುದು ಶ್ರೇಷ್ಠ.
ವೈಜ್ಞಾನಿಕ ಮಹತ್ವ
ಮಂತ್ರ ಪಠಣದ ವೇಳೆ ಉತ್ಪತ್ತಿಯಾಗುವ ಶಬ್ದ ತರಂಗಗಳು ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವುದಲ್ಲದೆ, ಒತ್ತಡವನ್ನು ಕಡಿಮೆ ಮಾಡಿ ದೇಹದಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.





