ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ದುರ್ಗಾ ಸಪ್ತಶತಿ ಪಾರಾಯಣವು ಆಧ್ಯಾತ್ಮಿಕವಾಗಿ ಅತ್ಯಂತ ಮಹತ್ವದ ಕಾರ್ಯವಾಗಿದೆ. ಈ ಪಾರಾಯಣವು ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುವ ಸಂದರ್ಭದಲ್ಲಿ ಭಕ್ತರಿಗೆ ಶಾಂತಿ, ಶಕ್ತಿ ಮತ್ತು ಸಮೃದ್ಧಿಯನ್ನು ತಂದುಕೊಡುತ್ತದೆ. ಮಾರ್ಕಂಡೇಯ ಪುರಾಣದ ಭಾಗವಾದ ದುರ್ಗಾ ಸಪ್ತಶತಿಯು 13 ಅಧ್ಯಾಯಗಳಲ್ಲಿ 700 ಶ್ಲೋಕಗಳನ್ನು ಒಳಗೊಂಡಿದ್ದು, ದೇವಿಯ ಮಹಿಮೆ, ದುಷ್ಟ ಶಕ್ತಿಗಳ ವಿರುದ್ಧದ ವಿಜಯ ಮತ್ತು ಆಕೆಯ ವಿವಿಧ ರೂಪಗಳನ್ನು ವಿವರಿಸುತ್ತದೆ.
ದುರ್ಗಾ ಸಪ್ತಶತಿ ಪಾರಾಯಣದ ಮಹತ್ವ
ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾ ಸಪ್ತಶತಿಯನ್ನು ಪಠಿಸುವುದರಿಂದ ಭಕ್ತರ ಜೀವನದಿಂದ ನಕಾರಾತ್ಮಕ ಶಕ್ತಿಗಳು, ಭಯ, ದುಃಖ ಮತ್ತು ಅಡೆತಡೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಇದರಿಂದ ಆಧ್ಯಾತ್ಮಿಕ ಶಾಂತಿ, ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಒದಗಿಸುತ್ತದೆ. ವ್ಯಾಪಾರ, ವೃತ್ತಿಜೀವನ ಮತ್ತು ಕುಟುಂಬದ ಸಮಸ್ಯೆಗಳನ್ನು ದೂರಗೊಳಿಸುವ ಶಕ್ತಿಯನ್ನು ಇದು ಹೊಂದಿದೆ. ಈ ಸಮಯದಲ್ಲಿ ದುರ್ಗಾ ದೇವಿಯನ್ನ ಪಠಿಸುವ ಭಕ್ತರ ಮೇಲೆ ದೇವಿ ಶೀಘ್ರವಾಗಿ ಪ್ರಸನ್ನಳಾಗುತ್ತಾಳೆ ಮತ್ತು ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂದು ಶಾಸ್ತ್ರಗಳು ಹೇಳುತ್ತವೆ. ಈ ಪಾರಾಯಣವು ಭಕ್ತರ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸಿ, ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ.
ಪಾರಾಯಣಕ್ಕೆ ಸಿದ್ಧತೆ
ದುರ್ಗಾ ಸಪ್ತಶತಿ ಪಾರಾಯಣವನ್ನು ಪ್ರಾರಂಭಿಸುವ ಮೊದಲು ಕೆಲವು ಸಿದ್ಧತೆಗಳು ಅಗತ್ಯವಾಗಿವೆ. ಮೊದಲಿಗೆ ಮನೆಯನ್ನು ಶುದ್ಧಗೊಳಿಸಿ, ಪೂಜಾ ಸ್ಥಳವನ್ನು ಸ್ವಚ್ಛವಾಗಿಡಬೇಕು ನಂತರ ಸ್ನಾನ ಮಾಡಿ, ಶುದ್ಧವಾದ ಬಟ್ಟೆಗಳನ್ನು, ವಿಶೇಷವಾಗಿ ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ. ದುರ್ಗಾ ದೇವಿಯ ವಿಗ್ರಹ ಅಥವಾ ಚಿತ್ರವನ್ನು ಸ್ವಚ್ಛವಾದ ಮಡಿಯಾದ ಸ್ಥಳದಲ್ಲಿ ಸ್ಥಾಪಿಸಬೇಕು.ತದನಂತರ ಕಲಶ ಸ್ಥಾಪನೆ ಮಾಡಿ ದೀಪವನ್ನು ಬೆಳಗಿಸಿ ಧೂಪ ಹಚ್ಚಿ ಹೂವು ಹಣ್ಣು ಮತ್ತು ನೈವೇದ್ಯವನ್ನು ಅರ್ಪಿಸಿದರೆ ಪಾರಾಯಣಕ್ಕೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತವೆ.
ಪಾರಾಯಣದ ವಿಧಾನ
ದುರ್ಗಾ ಸಪ್ತಶತಿ ಪಾರಾಯಣವನ್ನು ಶಾಸ್ತ್ರೀಯ ವಿಧಾನದಲ್ಲಿ ಮಾಡುವುದು ಮುಖ್ಯವಾಗಿದೆ ಹಾಗಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿಬೇಕಾಗುತ್ತದೆ.
-
ಸಂಕಲ್ಪ: ಪಾರಾಯಣವನ್ನು ಆರಂಭಿಸುವ ಮೊದಲು, ದುರ್ಗಾ ದೇವಿಯನ್ನು ಭಕ್ತಿಯಿಂದ ಪೂಜಿಸುವ ಸಂಕಲ್ಪವನ್ನು ತೆಗೆದುಕೊಳ್ಳಿ. ಯಾವುದೇ ಶುಭ ಕಾರ್ಯವನ್ನು ಗಣೇಶ ವಂದನೆಯೊಂದಿಗೆ ಆರಂಭಿಸಿ.
-
ಧ್ಯಾನ ಮತ್ತು ಮಂತ್ರ: ದುರ್ಗಾ ದೇವಿಯ ಧ್ಯಾನ ಮಾಡಿ “ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ” ಎಂಬ ಮಂತ್ರವನ್ನು ಜಪಿಸಿ. ಇದು ಮನಸ್ಸನ್ನು ಏಕಾಗ್ರಗೊಳಿಸುತ್ತದೆ.
-
ಪಾಠನ: 13 ಅಧ್ಯಾಯಗಳನ್ನು ಒಂದೊಂದಾಗಿ ಓದಿ. ಪ್ರತಿ ಶ್ಲೋಕವನ್ನು ಸ್ಪಷ್ಟ ಉಚ್ಚಾರಣೆಯೊಂದಿಗೆ ಮಧ್ಯಮ ಸ್ವರದಲ್ಲಿ, ಏಕಾಗ್ರತೆಯಿಂದ ಪಠಿಸಿ.
-
ಪೂರ್ಣಾಹುತಿ: ಪಾರಾಯಣ ಮುಗಿದ ನಂತರ, ದೇವಿಯ ಮಂತ್ರಗಳ ಜಪ, ಆರತಿ ಮತ್ತು ಹವನದೊಂದಿಗೆ ಪೂರ್ಣಾಹುತಿಯನ್ನು ಅರ್ಪಿಸಿ. ಇದರಿಂದ ಪೂಜೆಯ ಫಲವು ಪರಿಪೂರ್ಣವಾಗುತ್ತದೆ.
ಪಾರಾಯಣದ ನಿಯಮಗಳು
ದುರ್ಗಾ ಸಪ್ತಶತಿಯನ್ನು ಪಠಿಸುವಾಗ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
-
ಶುದ್ಧತೆ: ಶುದ್ಧ ಮನಸ್ಸು ಮತ್ತು ದೇಹದಿಂದ ಪಾಠವನ್ನು ಮಾಡಿ. ಕೈಗಳನ್ನು ತೊಳೆದು, ಶುದ್ಧ ಆಸನದ ಮೇಲೆ ಕುಳಿತುಕೊಳ್ಳಿ.
-
ಏಕಾಗ್ರತೆ: ಪಠಿಸುವಾಗ ಜೋರಾಗಿ ಮಾತನಾಡದೆ, ಶಾಂತವಾಗಿ, ಏಕಾಗ್ರತೆಯಿಂದ ಓದಿ.
-
ಉಚ್ಚಾರಣೆ: ಶ್ಲೋಕಗಳ ತಪ್ಪು ಉಚ್ಚಾರಣೆಯನ್ನು ತಪ್ಪಿಸಿ. ಸಾಧ್ಯವಾದರೆ, ವಿದ್ವಾಂಸ ಬ್ರಾಹ್ಮಣರಿಂದ ಉಚ್ಚಾರಣೆಯನ್ನು ಕಲಿತುಕೊಳ್ಳಿ.
-
ನಕಾರಾತ್ಮಕತೆಯಿಂದ ದೂರ: ಪಾರಾಯಣದ ಸಮಯದಲ್ಲಿ ನಕಾರಾತ್ಮಕ ಆಲೋಚನೆಗಳು ಅಥವಾ ಅಶುದ್ಧ ನಡವಳಿಕೆಯಿಂದ ದೂರವಿರಿ.
-
ಸಮಾಪನ: ಪಾರಾಯಣವನ್ನು ಆರತಿ, ಪ್ರಸಾದ ವಿತರಣೆ ಮತ್ತು ದೇವಿಯ ವಂದನೆಯೊಂದಿಗೆ ಪೂರ್ಣಗೊಳಿಸಿ.