ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಗೋಲ್ಗಪ್ಪ (ಪಾನಿ ಪೂರಿ) ತಿನ್ನುವಾಗ ಅಪರೂಪದ ಆರೋಗ್ಯ ಸಮಸ್ಯೆ ಎದುರಾದ ಘಟನೆ ನಡೆದಿದೆ. ಕಾಕೋರ್ ಬಳಿಯ ಗೌರಿ ಕಿಶನ್ಪುರ ಗ್ರಾಮದ ನಿವಾಸಿ ಇಂಕಲಾ ದೇವಿ (45) ಎಂಬ ಮಹಿಳೆಯೊಬ್ಬರು ಸೊಸೆಯ ಡೆಲಿವರಿಗಾಗಿ ಆಸ್ಪತ್ರೆಯಲ್ಲಿದ್ದರು. ಆಸ್ಪತ್ರೆ ಬಳಿಯ ಅಂಗಡಿಯಲ್ಲಿ ಗೋಲ್ಗಪ್ಪ ತಿನ್ನಲು ಮುಂದಾದಾಗ ದೊಡ್ಡದಾಗಿ ಬಾಯಿ ತೆರೆದರು. ಆದರೆ ಒಮ್ಮೆಲೆ ದವಡೆಯ ಸಂಧಿ (TMJ – Temporomandibular Joint) ಸ್ಥಳಾಂತರಗೊಂಡ ಕಾರಣ ಬಾಯಿ ಮುಚ್ಚಲು ಸಾಧ್ಯವೇ ಆಗಲಿಲ್ಲ.
ತೆರೆದ ಬಾಯಿಯೇ ತೆರೆದಿರುವ ಸ್ಥಿತಿ ನೋಡಿ ಸುತ್ತಮುತ್ತಲಿದ್ದವರು ಆಘಾತಕ್ಕೊಳಗಾದರು. ತಕ್ಷಣ ಸಂಬಂಧಿಕರು ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಸ್ಥಳೀಯ ವೈದ್ಯರು ಹಲವು ಬಾರಿ ಪ್ರಯತ್ನಿಸಿದರೂ ದವಡೆಯನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ. ನನ್ನ 20 ವರ್ಷಗಳ ವೈದ್ಯಕೀಯ ಜೀವನದಲ್ಲಿ ಇಂತಹ ಪ್ರಕರಣ ಇದೇ ಮೊದಲು ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಂತರ ಇಂಕಲಾ ದೇವಿಯನ್ನು ಸ್ಥಳಿಯ ದೊಡ್ಡ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ತಜ್ಞ ತಂಡದಿಂದ ವಿಶೇಷ ಚಿಕಿತ್ಸೆ ನೀಡಿ ದವಡೆಯನ್ನು ಸರಿಪಡಿಸಲಾಯಿತು. ಆದರೆ ಈಗಲೂ ಬಾಯಿ ಸಂಪೂರ್ಣವಾಗಿ ಮುಚ್ಚಲು ಆಗುತ್ತಿಲ್ಲ, ಮಾತನಾಡಲು ಮತ್ತು ಆಹಾರ ಸೇವಿಸಲು ತೀವ್ರ ನೋವು ಉಂಟಾಗುತ್ತಿದೆ. ವೈದ್ಯರು ಇನ್ನೂ 2-3 ದಿನಗಳಲ್ಲಿ ಪೂರ್ಣ ಚೇತರಿಕೆ ಸಾಧ್ಯ ಎಂದು ಭರವಸೆ ನೀಡಿದ್ದಾರೆ.
ಈ ಘಟನೆಯಿಂದ ಸ್ಥಳೀಯರು ದಂಗಾಗಿದ್ದಾರೆ. ಗೋಲ್ಗಪ್ಪ ಅಂಗಡಿ ಮಾಲೀಕನೂ ಇಂತಹ ಘಟನೆ ಎಂದೂ ನಡೆದಿರಲಿಲ್ಲ ಎಂದು ಹೇಳಿದ್ದಾನೆ. ಸಂಬಂಧಿ ಸಾವಿತ್ರಿ ದೇವಿ ಮಾತನಾಡಿ, ಇಂಕಾಲ ದೊಡ್ಡದಾಗಿ ಬಾಯಿ ತೆರೆದರು. ಗೋಲ್ಗಪ್ಪ ಬಾಯಿಗೆ ಹಾಕಿದ ಕೂಡಲೇ ಬಾಯಿ ಮುಚ್ಚದೇ ಇದ್ದಿದ್ದನ್ನು ನೋಡಿ ನಮಗೆ ಭಯವಾಯಿತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದೆವು ಎಂದು ಹೇಳಿದ್ದಾರೆ.
ವೈದ್ಯಕೀಯ ಭಾಷೆಯಲ್ಲಿ ಇದನ್ನು Acute Temporomandibular Joint Dislocation ಎನ್ನುತ್ತಾರೆ. ದವಡೆಯ ಕೀಲು (TMJ) ಮುಂದಕ್ಕೆ ಜಾರಿ ಸಾಮಾನ್ಯ ಸ್ಥಾನದಿಂದ ತಪ್ಪಿದಾಗ ಈ ಸ್ಥಿತಿ ಬರುತ್ತದೆ. ಗೋಲ್ಗಪ್ಪ, ಬರ್ಗರ್, ದೊಡ್ಡ ಸೇಬು ಇತ್ಯಾದಿಗಳನ್ನು ಆತುರದಲ್ಲಿ ದೊಡ್ಡದಾಗಿ ಬಾಯಿ ತೆರೆದು ತಿನ್ನುವಾಗ ಇದರ ಸಾಧ್ಯತೆ ಹೆಚ್ಚು.
ತಪ್ಪಿಸುವ ಕ್ರಮಗಳು – ನೀವೂ ಎಚ್ಚರಿಕೆಯಿಂದಿರಿ!
- ಆಹಾರ ತಿನ್ನುವಾಗ ಅತಿ ದೊಡ್ಡದಾಗಿ ಬಾಯಿ ತೆರೆಯಬೇಡಿ
- ಆತುರದಲ್ಲಿ ಗೋಲ್ಗಪ್ಪ, ಪಾನಿಪೂರಿ ತಿನ್ನಬೇಡಿ
- ದವಡೆಯಲ್ಲಿ ಈಗಾಗಲೇ ನೋವಿದ್ದರೆ ಬಲವಂತವಾಗಿ ಬಾಯಿ ತೆರೆಯಬೇಡಿ
- ಜಿಗುಟಾದ ಆಹಾರ (chewing gum) ಅತಿಯಾಗಿ ಸೇವಿಸಬೇಡಿ
- ದವಡೆಯಲ್ಲಿ ಕಿರಿಚಿರು ಶಬ್ದ ಅಥವಾ ನೋವಿದ್ದರೆ ತಕ್ಷಣ ದಂತವೈದ್ಯರನ್ನು ಭೇಟಿ ಮಾಡಿ





