ಉತ್ತರ ಪ್ರದೇಶ: ತನ್ನ ಪತ್ನಿ ಮತ್ತು ಮಗನನ್ನು ಆಕೆಯ ಹೆತ್ತವರೇ ಕೊಲೆ ಮಾಡಿದ್ದಾರೆ ಎಂದು ನಂಬಿ, ನ್ಯಾಯಾಲಯದಲ್ಲಿ ಹೋರಾಡುತ್ತಿದ್ದ ಪತಿಗೆ ಎರಡು ವರ್ಷಗಳ ನಂತರ ಸಿಕ್ಕ ಒಂದು ಓಟಿಪಿ (OTP) ಇಡೀ ಪ್ರಕರಣದ ದಿಕ್ಕನ್ನೇ ಬದಲಿಸಿದೆ. ಸತ್ತಿದ್ದಾಳೆ ಎಂದು ಭಾವಿಸಲಾಗಿದ್ದ ಹೆಂಡತಿ ರಾಜಸ್ಥಾನದಲ್ಲಿ ತನ್ನ ಹೊಸ ಪ್ರಿಯತಮನೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ನಿಗೂಢ ನಾಪತ್ತೆ
ಸಂದೀಪ್ ಕುಮಾರ್ ಮತ್ತು ಪ್ರಿಯಾಂಕಾ ಪ್ರಜಾಪತಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಒಬ್ಬ ಮಗನೂ ಇದ್ದನು. ಆದರೆ, ಕಾಲಕ್ರಮೇಣ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಜಗಳಗಳು ಶುರುವಾದವು. ಇದರ ಪರಿಣಾಮವಾಗಿ, ಜುಲೈ 1, 2024 ರಂದು ಪ್ರಿಯಾಂಕಾ ತನ್ನ ಲಕ್ಷಾಂತರ ಮೌಲ್ಯದ ಆಭರಣಗಳನ್ನು ತೆಗೆದುಕೊಂಡು ಗಂಡನ ಮನೆಯಿಂದ ಹೊರಬಂದಳು. ತಾಯಿಯ ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಅಲ್ಲಿಂದಲೂ ನಾಪತ್ತೆಯಾದಳು.
ಕೊಲೆ ಆರೋಪ
ಪ್ರಿಯಾಂಕಾ ನಾಪತ್ತೆಯಾದ ನಂತರ ಸಂದೀಪ್ ತನ್ನ ಅತ್ತೆ-ಮಾವನವರನ್ನು ವಿಚಾರಿಸಿದಾಗ, ಆಭರಣಗಳಿಗಾಗಿ ಆಕೆಯ ತಂದೆಯೇ ಮಗಳು ಮತ್ತು ಮೊಮ್ಮಗನನ್ನು ಕೊಲೆ ಮಾಡಿ ಶವಗಳನ್ನು ಸರಯು ನದಿಗೆ ಎಸೆದಿದ್ದಾರೆ ಎಂಬ ವದಂತಿ ಹಬ್ಬಿತು. ಇದನ್ನು ನಂಬಿದ ಸಂದೀಪ್, ನ್ಯಾಯಾಲಯದ ಮೆಟ್ಟಿಲೇರಿದರು. ಕೋರ್ಟ್ ಆದೇಶದಂತೆ ನವೆಂಬರ್ 4, 2024 ರಂದು ಪ್ರಿಯಾಂಕಾಳ ತಂದೆ ದಯಾರಾಮ್, ತಾಯಿ ಶುಭವತಿ ದೇವಿ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶದ ಪ್ರಕರಣ ದಾಖಲಾಯಿತು. ಎರಡು ವರ್ಷಗಳ ಕಾಲ ಪೊಲೀಸರು ಈ ನಿಗೂಢ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದರು.
ಕಥೆಗೆ ಟ್ವಿಸ್ಟ್ ಕೊಟ್ಟ ಆಧಾರ್ OTP!
ಪ್ರಕರಣದಲ್ಲಿ ಮಹತ್ತರ ತಿರುವು ಬಂದಿದ್ದು ಇತ್ತೀಚೆಗೆ. ಸಂದೀಪ್ ಅವರ ಮೊಬೈಲ್‌ಗೆ ಇದ್ದಕ್ಕಿದ್ದಂತೆ ಪ್ರಿಯಾಂಕಾ ಅವರ ಆಧಾರ್ ಕಾರ್ಡ್ ವಿವರಗಳನ್ನು ನವೀಕರಿಸಲು (Update) ಒಂದು OTP ಬಂದಿತು. ಸಂದೀಪ್ ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಈ ಸುಳಿವನ್ನೇ ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಶಾಕಿಂಗ್ ವಿಷಯವೊಂದು ತಿಳಿಯಿತು.
ಪತ್ನಿ ಪ್ರಿಯಾಂಕಾ ಸತ್ತಿರಲಿಲ್ಲ, ಬದಲಿಗೆ ಗಂಡನ ಮನೆ ತೊರೆದ ಮೇಲೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಆಕೆ, ನಂತರ ಅಯೋಧ್ಯೆಗೆ ತೆರಳಿದ್ದಳು. ಅಲ್ಲಿ ರಾಜಸ್ಥಾನದ ಮಂಗಲ್ ಚಂದ್ರ ಎಂಬುವವರ ಪರಿಚಯವಾಗಿ, ಇಬ್ಬರೂ ಪ್ರೀತಿಯಲ್ಲಿ ಬಿದ್ದು ರಾಜಸ್ಥಾನದಲ್ಲಿ ವಿವಾಹವಾಗಿ ವಾಸಿಸುತ್ತಿದ್ದರು. ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಾಯಿಸಲು ಹೋದಾಗ ಆಕೆಯ ಹಳೆಯ ನಂಬರ್ (ಸಂದೀಪ್ ಬಳಿ ಇದ್ದದ್ದು) ಗೆ OTP ಹೋಗಿ ಸತ್ಯ ಬಯಲಾಗಿದೆ.
ಪೊಲೀಸರು ರಾಜಸ್ಥಾನಕ್ಕೆ ತೆರಳಿ ಪ್ರಿಯಾಂಕಾಳನ್ನು ಪತ್ತೆ ಹಚ್ಚಿದ್ದಾರೆ. ಈಗ ತನ್ನ ಮಗನ ಪಾಲನೆಯನ್ನು ತನಗೆ ನೀಡಬೇಕೆಂದು ಪತಿ ಸಂದೀಪ್ ಒತ್ತಾಯಿಸುತ್ತಿದ್ದಾರೆ. ಇತ್ತ, ಸುಳ್ಳು ಕೊಲೆ ಪ್ರಕರಣದಲ್ಲಿ ಸಿಲುಕಿ ಜೈಲು ವಾಸದ ಭೀತಿ ಎದುರಿಸಿದ್ದ ಪ್ರಿಯಾಂಕಾಳ ಪೋಷಕರು ಆಕೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
