ಕುಡಿದು ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು

BeFunky collage 2026 02 12T175841.420

ಹರ್ಯಾಣದ ಅಂಬಾಲಾದಲ್ಲಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಪೊಲೀಸ್ ಅಧಿಕಾರಿಯ ಉದ್ಧಟತನಕ್ಕೆ 24 ವರ್ಷದ ಯುವತಿ ನಿಕಿತಾ ಬಲಿಯಾಗಿದ್ದಾಳೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿ ಈ ದುರಂತ ಘಟನೆಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆಯ ನಂತರ ಸ್ಥಳೀಯರು ಪೊಲೀಸ್ ಅಧಿಕಾರಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಹೇಗೆ ನಡೆಯಿತು?

ಗುರುಗ್ರಾಮ್‌ನಲ್ಲಿ ಕೆಲಸ ಮಾಡುತ್ತಿದ್ದ ನಿಕಿತಾ ಕೆಲಸ ಮುಗಿಸಿ ಅಂಬಾಲಾಕ್ಕೆ ಮರಳಿದ್ದಳು. ಅಂಬಾಲಾದಿಂದ ತನ್ನ ಊರಿಗೆ ತೆರಳಲು ಈ-ರಿಕ್ಷಾ ಹತ್ತಿದ್ದಳು. ಈ-ರಿಕ್ಷಾದಲ್ಲಿ ನಾಲ್ವರು ಪ್ರಯಾಣಿಕರಿದ್ದರು, ನಿಕಿತಾ ಬದಿಯಲ್ಲಿ ಕುಳಿತಿದ್ದಳು. ಈ ವೇಳೆ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಪೊಲೀಸ್ ಅಧಿಕಾರಿ ವೇಗವಾಗಿ ಬಂದು ಈ-ರಿಕ್ಷಾಗೆ ಡಿಕ್ಕಿ ಹೊಡೆದನು. ರಭಸದಿಂದ ನಿಕಿತಾ ರಸ್ತೆಗೆ ಬಿದ್ದಳು. ಆದರೆ ಪೊಲೀಸ್ ವಾಹನವನ್ನು ನಿಲ್ಲಿಸದೆ ಮುಂದಕ್ಕೆ ಹೋಗಿ ಯುವತಿಯ ಮೇಲಿಂದ ಹರಿದು ಹೋದನು. ತಕ್ಷಣವೇ ಗಂಭೀರ ಗಾಯಗೊಂಡ ನಿಕಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಈ ರಿಕ್ಷಾ ಚಾಲಕನು ನೀಡಿರುವ ಹೇಳಿಕೆಯ ಪ್ರಕಾರ, ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ನಂತರ ನಿಲ್ಲಿಸಬಹುದಾಗಿತ್ತು. ಆದರೆ ಪೊಲೀಸ್ ಅಧಿಕಾರಿ ವೇಗವಾಗಿ ಮುಂದಕ್ಕೆ ಹೋದನು. ಇದರಿಂದ ಯುವತಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಚಾಲಕ ತಿಳಿಸಿದ್ದಾರೆ.

ಪೊಲೀಸ್ ಹಿಡಿದ ಸ್ಥಳೀಯರು ಅಂಬಾಲಾ ಸೇತುವೆ ಬಳಿ ನಡೆದ ಈ ಘಟನೆಯ ನಂತರ ಪೊಲೀಸ್ ಅಧಿಕಾರಿ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದನು. ಆದರೆ ಸ್ಥಳೀಯರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಿಕಿತಾಳನ್ನು ಸ್ಥಳೀಯರು ತಕ್ಷಣವೇ ಸಿಟಿ ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಚಿಕಿತ್ಸೆಗೆ ಸಿಗುವ ಮೊದಲೇ ಆಕೆ ಮೃತಪಟ್ಟಿದ್ದಾಳೆ.

ಪೋಷಕರ ಆಕ್ರಂದನ, ಆಸ್ಪತ್ರೆಯಲ್ಲಿ ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ನಿಕಿತಾಳ ಪೋಷಕರು ಆಸ್ಪತ್ರೆಗೆ ಧಾವಿಸಿದರು. ಮಗಳನ್ನು ಕಳೆದುಕೊಂಡ ನೋವಿನಲ್ಲಿ ಅವರು ಆಕ್ರಂದನ ಮಾಡುತ್ತಿದ್ದರು. ಆಸ್ಪತ್ರೆಯ ಮುಂದೆ ಕುಟುಂಬಸ್ಥರು ಮತ್ತು ಆಪ್ತರು ಭಾರಿ ಪ್ರತಿಭಟನೆ ನಡೆಸಿ ಪೊಲೀಸ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

ಪ್ರಕರಣದ ತನಿಖೆ ಆರಂಭವಾಗಿದ್ದು, ಕುಡಿದು ವಾಹನ ಚಲಾಯಿಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version