ಸೋಷಿಯಲ್ ಮೀಡಿಯಾ ಹುಚ್ಚು: ನಿದ್ರೆಯಲ್ಲಿದ್ದ ತಂದೆಯ ಕತ್ತು ಸೀಳಿದ ಪಾಪಿ ಪುತ್ರಿ

Untitled design 2026 02 12T173255.339

ಛತ್ತಿಸ್‌ಘಡ್‌: ಮಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣವನ್ನ ಬಳಸುತ್ತಿದ್ದಕ್ಕೆ ತಂದೆ ತೀವ್ರ ವಿರೋಧಿಸುತ್ತಿದ್ದರು. ಈ ಒಂದೇ ಕಾರಣಕ್ಕೆ ಮಗಳೊಬ್ಬಳು ಹೆತ್ತ ತಂದೆಯನ್ನೇ ಕತ್ತು ಸೀಳಿ ಹತ್ಯೆ ಮಾಡಿರುವ ಅಮಾನುಷ ಘಟನೆ ರಾಯ್‌ಪುರದ ಕೋರ್ಬಾ ಜಿಲ್ಲೆಯ ಹರ್ಡಿಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ರಲಿಯಾ ಗ್ರಾಮದಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ

ಮೃತ ದುರ್ದೈವಿಯನ್ನು 55 ವರ್ಷದ ಅಶೋಕ್ ಕುಮಾರ್ ಕೆವಟ್ ಎಂದು ಗುರುತಿಸಲಾಗಿದೆ. ಆರೋಪಿ ಮಗಳು ಗೀತಾ ಕೆವಟ್ (27) ಒಬ್ಬ ಯೂಟ್ಯೂಬರ್ ಆಗಿದ್ದು, ತನ್ನದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಳು. ಇವಳು ದಿನದ ಬಹುಪಾಲು ಸಮಯವನ್ನು ಮೊಬೈಲ್ ಫೋನ್ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಳು ಎನ್ನಲಾಗಿದೆ.

ಮಗಳು ತೀವ್ರವಾಗಿ ಸಾಮಾಜಿಕ ಜಾಲತಾಣಕ್ಕ ಅಡಿಕ್ಟ್‌ ಆಗಿದ್ದಳು ಇದರಿಂದ ಮನೆಯವರಿಗ ತಹುಂಬಾ ಕಿರಿಕಿರಿಯಾಗಿತ್ತು. ಹೀಗಾಗಿ ತಂದೆ ಅಶೋಕ್ ಕುಮಾರ್ ಅವರು ಮಗಳ ಈ ಸೋಶಿಯಲ್ ಮೀಡಿಯಾ ಚಟುವಟಿಕೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರು. ಸದಾ ಮೊಬೈಲ್‌ನಲ್ಲಿ ಇರಬೇಡ, ಮನೆಯ ಕಡೆ ಗಮನ ಕೊಡು ಎಂಬ ಕಿವಿಮಾತುಗಳು ಗೀತಾಳಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದವು. ಇದರ ಜೊತೆಗೆ ಕುಟುಂಬದಲ್ಲಿ ಆಸ್ತಿ ಮತ್ತು ಭೂಮಿಗೆ ಸಂಬಂಧಿಸಿದಂತೆಯೂ ಸಣ್ಣಪುಟ್ಟ ಕಲಹಗಳು ನಡೆಯುತ್ತಿದ್ದವು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ನಿದ್ರೆಯಲ್ಲಿದ್ದ ತಂದೆಯ ಕತ್ತು ಸೀಳಿದ ಮಗಳು

ಘಟನೆಯ ದಿನ ರಾತ್ರಿ, ತಂದೆ ಮತ್ತು ಮಗಳ ನಡುವೆ ಇದೇ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. ಇದರಿಂದ ರೊಚ್ಚಿಗೆದ್ದ ಗೀತಾ, ತಂದೆಯ ಹತ್ಯೆಗೆ ಸಂಚು ರೂಪಿಸಿದ್ದಾಳೆ. ಅಶೋಕ್ ಕುಮಾರ್ ಅವರು ಗಾಢ ನಿದ್ರೆಯಲ್ಲಿದ್ದಾಗ, ಗೀತಾ ಹರಿತವಾದ ಆಯುಧದಿಂದ ಕತ್ತು ಸೀಳಿ ಭೀಕರವಾಗಿ ಹಲ್ಲೆ ನಡೆಸಿದ್ದಾಳೆ. ತೀವ್ರ ರಕ್ತಸ್ರಾವದಿಂದ ಅಶೋಕ್ ಕುಮಾರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಪೊಲೀಸ್ ಕಾರ್ಯಾಚರಣೆ 

ಕೃತ್ಯ ಎಸಗಿದ ಬಳಿಕ ಗೀತಾ ತಾನೇ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿದ ತಕ್ಷಣ ಹರ್ಡಿಬಜಾರ್ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆರೋಪಿ ಮಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಕೃತ್ಯಕ್ಕೆ ಬಳಸಲಾದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಗೀತಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಸದ್ಯ ಆರೋಪಿ ಗೀತಾ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಕಠಿಣ ಶಿಕ್ಷೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version