ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಫಲಿತಾಂಶದ ಹಿನ್ನೆಲೆಯಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮೊದಲ ಸರ್ಕಾರ ರಚನೆಗೆ ಸಜ್ಜಾಗಿದೆ. ಐತಿಹಾಸಿಕ ಗೆಲುವಿನೊಂದಿಗೆ ಪಾರ್ಟಿಯ ಹಿರಿಯ ನಾಯಕ ಸುವೆಂದು ಅಧಿಕಾರಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮಮತಾ ಬ್ಯಾನರ್ಜಿ ಅವರ 10 ವರ್ಷಗಳ ಆಡಳಿತಕ್ಕೆ ತೆರೆ ಎಳೆದಂತಾಗಿದೆ.
ಕೋಲ್ಕತ್ತಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುವೆಂದು ಅಧಿಕಾರಿ ಹೆಸರನ್ನು ಏಕಮತದಿಂದ ಘೋಷಿಸಲಾಯಿತು. ಪಕ್ಷದ ಹಿರಿಯ ನಾಯಕರು, ಹೊಸದಾಗಿ ಆಯ್ಕೆಯಾದ ಶಾಸಕರು ಹಾಗೂ ಕೇಂದ್ರ ನಾಯಕರ ಸಮ್ಮುಖದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈ ಚುನಾವಣೆಯಲ್ಲಿ ಬಿಜೆಪಿ 294 ಕ್ಷೇತ್ರಗಳ ಪೈಕಿ 293 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಅದರಲ್ಲಿ 207 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ದಾಖಲಿಸಿದೆ. ಸರ್ಕಾರ ರಚನೆಗೆ ಅಗತ್ಯವಿದ್ದ 148 ಸ್ಥಾನಗಳ ಗಡಿ ದಾಟಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಇನ್ನೊಂದೆಡೆ, ಹಲವು ವರ್ಷಗಳಿಂದ ರಾಜ್ಯವನ್ನು ಆಡಳಿತ ನಡೆಸುತ್ತಿದ್ದ ಟಿಎಂಸಿ ಪಕ್ಷ ಕೇವಲ 80 ಸ್ಥಾನಗಳಿಗೆ ಸೀಮಿತಗೊಂಡಿದೆ. ಕಾಂಗ್ರೆಸ್ ಕೇವಲ 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.
ಇನ್ನೊಂದೆಡೆ, ಸರ್ಕಾರ ರಚನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿಗಳ ಆಯ್ಕೆ ಕೂಡ ಭಾರೀ ಕುತೂಹಲ ಹುಟ್ಟಿಸಿದೆ. ಪಕ್ಷದ ಮೂಲಗಳ ಪ್ರಕಾರ, ರಾಜ್ಯದಲ್ಲಿ ಇಬ್ಬರು ಡಿಸಿಎಂಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ. ಅವರಲ್ಲಿ ಒಬ್ಬರು ಮಹಿಳಾ ನಾಯಕಿಯಾಗಿರುವ ಸಾಧ್ಯತೆ ಹೆಚ್ಚಾಗಿದೆ.
ದಕ್ಷಿಣ ಅಸಾನ್ಸೋಲ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ನಾಯಕಿ ಅಗ್ನಿಮಿತ್ರಾ ಪೌಲ್ ಅವರ ಹೆಸರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿದೆ. ಜೊತೆಗೆ ಮಾಜಿ ಕೇಂದ್ರ ಸಚಿವ ನಿಸಿತ್ ಪ್ರಾಮಾಣಿಕ್ ಅವರನ್ನೂ ಎರಡನೇ ಡಿಸಿಎಂ ಸ್ಥಾನಕ್ಕೆ ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ. ಬುಡಕಟ್ಟು ಸಮುದಾಯಕ್ಕೆ ಪ್ರತಿನಿಧಿತ್ವ ನೀಡುವ ಉದ್ದೇಶದಿಂದ ಮತ್ತೊಬ್ಬ ಪ್ರಮುಖ ನಾಯಕರಿಗೂ ಅವಕಾಶ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
