ಪಶ್ಚಿಮ ಬಂಗಾಳ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಹಲವು ವರ್ಷಗಳಿಂದ ತೃಣಮೂಲ ಕಾಂಗ್ರೆಸ್ ಆಳ್ವಿಕೆಯಲ್ಲಿ ಇದ್ದ ಈ ರಾಜ್ಯದಲ್ಲಿ ಇದೀಗ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ರಚನೆಗೆ ಸಜ್ಜಾಗಿದೆ. ಮೇ 9, ಶನಿವಾರ ಹೊಸ ಸರ್ಕಾರದ ಪ್ರಮಾಣವಚನ ಸಮಾರಂಭ ನಡೆಯಲಿದೆ.
ರಾಜಧಾನಿ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪರೇಡ್ ಗ್ರೌಂಡ್‌ನಲ್ಲಿ ಈ ಮಹತ್ವದ ಕಾರ್ಯಕ್ರಮ ನಡೆಯಲಿದೆ. ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸಿ ಅದ್ಧೂರಿಯಾಗಿ ಪ್ರಮಾಣವಚನ ಸಮಾರಂಭ ನಡೆಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ಕಾರ್ಯಕ್ರಮಕ್ಕೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೇ ವೇಳೆ, ಪಶ್ಚಿಮ ಬಂಗಾಳದ ಹೊಸ ಮುಖ್ಯಮಂತ್ರಿ ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಮಿತ್ ಭಟ್ಟಾಚಾರ್ಯ ಅವರು ಪ್ರಮಾಣವಚನದ ದಿನಾಂಕ ಘೋಷಣೆ ಮಾಡಿದ್ದರೂ, ಸಿಎಂ ಅಭ್ಯರ್ಥಿ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಇದರಿಂದ ಪಕ್ಷದ ಒಳಗಡೆ ತೀವ್ರ ಕುತೂಹಲ ಮತ್ತು ಚರ್ಚೆಗಳು ಮುಂದುವರಿದಿವೆ.
ಸದ್ಯ ಸಿಎಂ ಸ್ಥಾನಕ್ಕೆ ಪ್ರಮುಖವಾಗಿ ಇಬ್ಬರ ಹೆಸರುಗಳು ಕೇಳಿಬರುತ್ತಿವೆ. ಒಬ್ಬರು ಸುವೇಂದು ಅಧಿಕಾರಿ, ಮತ್ತೊಬ್ಬರು ದಿಲೀಪ್ ಘೋಷ್ ಇವರ ಹೆಸರು ಕೇಳಿಬರುತ್ತಿವೆ. ಈ ಇಬ್ಬರೂ ನಾಯಕರು ಪಕ್ಷದೊಳಗೆ ಬಲಿಷ್ಠ ನಾಯಕತ್ವ ಹೊಂದಿದ್ದು, ಸಿಎಂ ಕುರ್ಚಿಗಾಗಿ ನೇರ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ರಾಜಕೀಯ ವಲಯದಲ್ಲಿ ಸುವೇಂದು ಅಧಿಕಾರಿ ಅವರಿಗೆ ಹೆಚ್ಚು ಅವಕಾಶಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸುವೇಂದು ಅಧಿಕಾರಿ ಅವರು ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದಾರೆ. ಈ ಜಯದೊಂದಿಗೆ ಅವರು ರಾಜ್ಯ ರಾಜಕೀಯದಲ್ಲಿ ಪ್ರಮುಖ ಮುಖಂಡರಾಗಿ ಹೊರಹೊಮ್ಮಿದ್ದಾರೆ. ಇದೇ ಕಾರಣದಿಂದ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವ ಸಾಧ್ಯತೆ ಹೆಚ್ಚು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ, ದಿಲೀಪ್ ಘೋಷ್ ಕೂಡ ಪಕ್ಷದ ನಿಷ್ಠಾವಂತ ನಾಯಕನಾಗಿದ್ದು, ರಾಜ್ಯದಲ್ಲಿ ಬಿಜೆಪಿ ಸಂಘಟನೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಅವರಿಗೂ ಸಿಎಂ ಸ್ಥಾನಕ್ಕೆ ಅವಕಾಶ ಇದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಂತಿಮ ನಿರ್ಧಾರ ಪಕ್ಷದ ಕೇಂದ್ರ ನಾಯಕರ ಕೈಯಲ್ಲಿದ್ದು, ಕೊನೆಯ ಕ್ಷಣದಲ್ಲಿ ಏನು ತೀರ್ಮಾನವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
