ಕೇರಳ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಭಾರೀ ಭೂಕುಸಿತ ಸಂಭವಿಸಿದೆ. ಮೆಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಈ ಘಟನೆ ನಡೆದಿದ್ದು, ಕನಿಷ್ಠ ಐದು ಮಂದಿ ಮೃತಪಟ್ಟಿದ್ದಾರೆ. ಅವಶೇಷಗಳ ಅಡಿಯಲ್ಲಿ ಹಲವಾರು ಮಂದಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ದೊಡ್ಡ ಮಟ್ಟದ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ.
ಘಟನೆ ಎಲ್ಲಿ, ಹೇಗೆ?
ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಮೀನಾಕ್ಷಿ ಸೇತುವೆಯ ಬಳಿ ಈ ದುರ್ಘಟನೆ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ವಯನಾಡ್‌ನಲ್ಲಿ ಭಾರೀ ಮಳೆಯಾಗಿದ್ದು, ಇದೇ ಭೂಕುಸಿತಕ್ಕೆ ಪ್ರಮುಖ ಕಾರಣವೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಭಾರಿ ಮಳೆಯ ಹಿನ್ನೆಲೆ ಸೋಮವಾರದಿಂದಲೇ ಸುರಂಗ ಯೋಜನೆಯ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು.
ಭೂಕುಸಿತದಲ್ಲಿ ಸುರಂಗ ಯೋಜನೆಯ ಕಾರ್ಮಿಕರು ತಂಗಿದ್ದ ವಸತಿ ಗೃಹಗಳು (ಶೆಡ್ಗಳು) ಮಣ್ಣಿನಡಿ ಸಮಾಧಿಯಾಗಿವೆ. ಜೊತೆಗೆ ಪ್ರದೇಶದಲ್ಲಿದ್ದ ಕೆಲವು ಮನೆಗಳು ಮತ್ತು ಹೋಮ್‌ಸ್ಟೇಗಳಿಗೂ ಹಾನಿಯಾಗಿದೆ. ಕಾಮಗಾರಿಗೆ ಬಳಸಲಾಗುತ್ತಿದ್ದ ಹಲವು ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿ ನುಜ್ಜುಗುಜ್ಜಾಗಿವೆ.
ರಕ್ಷಣಾ ಕಾರ್ಯಾಚರಣೆ
ಭೂಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ, ಪೊಲೀಸ್ ಹಾಗೂ NDRF ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ. ಸ್ಥಳೀಯ ನಿವಾಸಿಗಳು ತಾವಾಗಿಯೇ ರಕ್ಷಣಾ ಕಾರ್ಯ ಆರಂಭಿಸಿ ಆರು ಜನರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಸಚಿವ ಟಿ. ಸಿದ್ದಿಕ್ ಮತ್ತು ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಪರಿಸ್ಥಿತಿ ವೀಕ್ಷಿಸುತ್ತಿದ್ದಾರೆ. ಮಣ್ಣಿನಡಿ ಇನ್ನೂ ಯಾರಾದರೂ ಸಿಲುಕಿದ್ದಾರೆಯೇ ಎಂದು ಪತ್ತೆಹಚ್ಚಲು ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ಸರ್ಕಾರದ ತುರ್ತು ಕ್ರಮ
ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಘಟನೆಯ ಬೆನ್ನಲ್ಲೇ ಜಿಲ್ಲೆಯ ಸಚಿವರೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಸಚಿವರಾದ ಎ.ಪಿ. ಅನಿಲ್ ಕುಮಾರ್ ಮತ್ತು ಟಿ. ಸಿದ್ದಿಕ್ ಅವರಿಗೆ ಸಿಎಂ ಆದೇಶಿಸಿದ್ದಾರೆ. ಇಬ್ಬರೂ ಸಚಿವರು ತಕ್ಷಣ ವಯನಾಡ್ಗೆ ತೆರಳಿ ರಕ್ಷಣಾ ಕಾರ್ಯದ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ.
ಕಳೆದ ವರ್ಷ ಆರಂಭಗೊಂಡಿದ್ದ ಈ ಮಹತ್ವದ ಸುರಂಗ ರಸ್ತೆ ಯೋಜನೆಯು ಮಲಪ್ಪುರಂ ಮತ್ತು ವಯನಾಡ್ ನಡುವಿನ ಸಂಪರ್ಕವನ್ನು ಸುಲಭಗೊಳಿಸುವ ಉದ್ದೇಶ ಹೊಂದಿತ್ತು. ಆದರೆ ಈಗ ಸಂಭವಿಸಿರುವ ಭೂಕುಸಿತದಿಂದ ಯೋಜನಾ ಸ್ಥಳಕ್ಕೆ ಎಷ್ಟು ಹಾನಿಯಾಗಿದೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಭಾರಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ವಯನಾಡ್ ಜಿಲ್ಲೆಯಲ್ಲಿ ಎಚ್ಚರಿಕೆ ಸೂಚನೆಗಳನ್ನು ನೀಡಲಾಗಿದೆ. ಜನರು ಅಪಾಯಕಾರಿ ಪ್ರದೇಶಗಳಿಂದ ದೂರವಿರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
