ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುಂಬೈ, ಥಾಣೆ, ಪುಣೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಕಾರಣ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ.
ಕೆಲವು ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದ್ದು, ವಿವಿಧ ಅವಘಡಗಳಲ್ಲಿ ಸುಮಾರು ಹತ್ತು ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಥಾಣೆ ಜಿಲ್ಲೆಯ ಭಿವಂಡಿಯ ಯುವಕನೊಬ್ಬ ತನ್ನ ವಿಶಿಷ್ಟ ಸೇವಾ ಮನೋಭಾವದಿಂದ ದೇಶದಾದ್ಯಂತ ಗಮನ ಸೆಳೆದಿದ್ದಾನೆ.
ಭಿವಂಡಿಯ ನಿವಾಸಿ ಶಾದಾಬ್ ಮೊಮಿನ್, ‘ಫ್ರೆಂಡ್ಲಿ ಸ್ಪೈಡರ್‌ಮ್ಯಾನ್’ ಎಂಬ ಹೆಸರಿನಲ್ಲಿ ಸ್ಪೈಡರ್‌ಮ್ಯಾನ್ ವೇಷ ಧರಿಸಿ ಪ್ರವಾಹಪೀಡಿತ ರಸ್ತೆಗಳಲ್ಲಿ ಜನರಿಗೆ ನೆರವಾಗುತ್ತಿದ್ದಾರೆ. ಮೊಣಕಾಲಿನಷ್ಟು ನೀರು ನಿಂತಿರುವ ರಸ್ತೆಗಳಲ್ಲಿನ ಗುಂಡಿಗಳು ಕಾಣಿಸದೇ ವಾಹನ ಸವಾರರು ಅಪಾಯಕ್ಕೆ ಸಿಲುಕುತ್ತಿರುವುದನ್ನು ಗಮನಿಸಿದ ಅವರು, ಯಾವುದೇ ಅಧಿಕಾರಿಯ ಸೂಚನೆಗಾಗಿ ಕಾಯದೆ ಸ್ವಯಂಪ್ರೇರಿತವಾಗಿ ಸೇವಾ ಕಾರ್ಯ ಆರಂಭಿಸಿದ್ದಾರೆ.
ಸ್ಪೈಡರ್‌ಮ್ಯಾನ್ ವೇಷದಲ್ಲೇ ರಸ್ತೆಯ ಮಧ್ಯೆ ನಿಂತು ವಾಹನ ಚಾಲಕರಿಗೆ ಸುರಕ್ಷಿತ ದಾರಿ ತೋರಿಸುವುದು, ನೀರಿನಲ್ಲಿ ಸಿಲುಕಿದ ಬೈಕ್ ಹಾಗೂ ಕಾರುಗಳನ್ನು ಹೊರತೆಗೆದು ತಳ್ಳುವುದು, ಅಪಾಯದ ಸ್ಥಳಗಳ ಬಗ್ಗೆ ಎಚ್ಚರಿಕೆ ನೀಡುವುದು ಸೇರಿದಂತೆ ಹಲವು ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಇದರಿಂದ ಅನೇಕ ವಾಹನ ಸವಾರರು ಅಪಘಾತಗಳಿಂದ ಪಾರಾಗಿದ್ದಾರೆ.
बारिश के बीच ‘स्पाइडर-मैन’ बना ट्रैफिक गाइड!
महाराष्ट्र के भिवंडी में भारी बारिश के बीच जलभराव और गड्ढों से भरी सड़कों पर एक स्थानीय युवक ने स्पाइडर-मैन की पोशाक पहनकर वाहन चालकों की मदद की.
वह सड़क पर खड़े होकर लोगों को सुरक्षित रास्ता दिखाता नजर आया, ताकि वे गड्ढों और जलभराव… pic.twitter.com/Pynb2AUJVO
— zingabad (@zingabad) July 5, 2026
ಇಷ್ಟೇ ಅಲ್ಲ, ರಸ್ತೆ ದಾಟಲು ಭಯಪಡುವ ಮಕ್ಕಳು ಹಾಗೂ ವೃದ್ಧರಿಗೆ ಸಹ ಶಾದಾಬ್ ಮೊಮಿನ್ ನೆರವಾಗುತ್ತಿದ್ದಾರೆ. ಮಕ್ಕಳಿಗೆ ಸ್ಪೈಡರ್‌ಮ್ಯಾನ್ ಎಂದರೆ ವಿಶೇಷ ಅಭಿಮಾನ ಇರುವುದರಿಂದ, ಅವರನ್ನು ಕಂಡ ಮಕ್ಕಳು ಸಂತೋಷದಿಂದ ಅವರ ಬಳಿಗೆ ಬರುತ್ತಿದ್ದಾರೆ. ಕೆಲ ಮಕ್ಕಳನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿ, ಅವರೊಂದಿಗೆ ಫೋಟೋ ತೆಗೆಸಿಕೊಂಡು ಧೈರ್ಯ ತುಂಬುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
भिवंडी का असली हीरो! 🕷️💪
जब तीन बत्ती मार्केट में जलभराव की समस्या ने लोगों को परेशान किया, तो एक युवक ने ‘स्पाइडरमैन’ का रूप धारण कर खुद नाली साफ करने का जिम्मा उठाया। जिम्मेदारी निभाने का यह अंदाज न केवल अनोखा है, बल्कि हम सबके लिए एक सीख भी है। सलाम है इस जज्बे को pic.twitter.com/YCKOukd1S6— Waseem Zaidi (@NewsZD) July 5, 2026
ಸ್ಥಳೀಯ ನಿವಾಸಿಗಳು ಶಾದಾಬ್ ಮೊಮಿನ್ ಅವರನ್ನು ಪ್ರೀತಿಯಿಂದ ‘ಭಿವಂಡಿ ಸ್ಪೈಡರ್‌ಮ್ಯಾನ್’ ಎಂದು ಕರೆಯಲು ಆರಂಭಿಸಿದ್ದಾರೆ. ಅವರ ಸೇವಾ ಮನೋಭಾವವನ್ನು ಕಂಡ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಸಂಕಷ್ಟದ ಸಮಯದಲ್ಲಿ ಸಮಾಜಕ್ಕಾಗಿ ಕೆಲಸ ಮಾಡುವ ನಿಜವಾದ ಹೀರೋ ಇವರೇ ಎಂದು ಹೊಗಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಶಾದಾಬ್ ಸ್ಪೈಡರ್‌ಮ್ಯಾನ್ ಶೈಲಿಯ ಭಂಗಿಗಳನ್ನು ಪ್ರದರ್ಶಿಸುತ್ತಾ ಜನರನ್ನು ರಂಜಿಸುವ ಜೊತೆಗೆ, ಸಾರ್ವಜನಿಕ ಸುರಕ್ಷತೆಯ ಮಹತ್ವವನ್ನೂ ಮನವರಿಕೆ ಮಾಡಿಕೊಡುತ್ತಿದ್ದಾರೆ. ಯುವಕರು ಈ ವಿಡಿಯೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು, ಲಕ್ಷಾಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಇನ್ನೂ ಮುಂದುವರಿದಿರುವ ಹಿನ್ನೆಲೆ ಹಲವು ಪ್ರದೇಶಗಳಲ್ಲಿ ಆಡಳಿತದಿಂದ ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಆದರೆ ಇಂತಹ ಸಂದರ್ಭದಲ್ಲಿ ಸಾಮಾನ್ಯ ನಾಗರಿಕರೂ ಸಮಾಜದ ಜವಾಬ್ದಾರಿಯನ್ನು ಅರಿತು ಕೈಜೋಡಿಸಿದರೆ ಅನೇಕ ಅಪಾಯಗಳನ್ನು ತಪ್ಪಿಸಬಹುದು ಎಂಬುದಕ್ಕೆ ಶಾದಾಬ್ ಮೊಮಿನ್ ಉತ್ತಮ ಉದಾಹರಣೆಯಾಗಿದ್ದಾರೆ.
