ಭಾರತೀಯ ರೈಲ್ವೆ ಕಳೆದ ಕೆಲವು ವರ್ಷಗಳಲ್ಲಿ ವೇಗವಾಗಿ ಆಧುನೀಕರಣದತ್ತ ಸಾಗುತ್ತಿದೆ. ಪ್ರಯಾಣಿಕರಿಗೆ ಹೆಚ್ಚು ಸುರಕ್ಷಿತ, ಆರಾಮದಾಯಕ ಮತ್ತು ವೇಗದ ಸೇವೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಮತ್ತು ‘ಅಮೃತ್ ಭಾರತ್ ಎಕ್ಸ್‌ಪ್ರೆಸ್’ ರೈಲುಗಳು ವಿಶೇಷ ಗಮನ ಸೆಳೆದಿವೆ. ಎರಡೂ ರೈಲುಗಳು ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದರೂ, ಅವುಗಳ ಉದ್ದೇಶ, ಸೌಲಭ್ಯಗಳು ಹಾಗೂ ಟಿಕೆಟ್ ದರಗಳಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್
ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತದಲ್ಲೇ ನಿರ್ಮಾಣಗೊಂಡ ಅತ್ಯಾಧುನಿಕ ಸೆಮಿ ಹೈ-ಸ್ಪೀಡ್ ರೈಲು. ಈ ರೈಲು ಪ್ರತ್ಯೇಕ ಎಂಜಿನ್ ಹೊಂದಿರುವುದಿಲ್ಲ. ಬದಲಿಗೆ ‘ಇಂಟಿಗ್ರೇಟೆಡ್ ಟ್ರೈನ್‌ಸೆಟ್’ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ವೇಗವಾಗಿ ಚಲಿಸಲು ಹಾಗೂ ಕಡಿಮೆ ಸಮಯದಲ್ಲಿ ಗಮ್ಯಸ್ಥಾನ ತಲುಪಲು ಸಹಕಾರಿಯಾಗಿದೆ.
ಈ ರೈಲು ಸಂಪೂರ್ಣವಾಗಿ ಎಸಿ ಕೋಚ್‌ಗಳನ್ನು ಒಳಗೊಂಡಿದೆ. ಆಟೋಮ್ಯಾಟಿಕ್ ಪ್ಲಗ್ ಡೋರ್‌ಗಳು, ರೊಟೇಟಿಂಗ್ ಸೀಟುಗಳು, ಬಯೋ-ವ್ಯಾಕ್ಯೂಮ್ ಶೌಚಾಲಯ, ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ ಹಾಗೂ ‘ಕವಚ್’ ಸುರಕ್ಷತಾ ವ್ಯವಸ್ಥೆ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ. ಇಂಟರ್-ಸಿಟಿ ಪ್ರಯಾಣವನ್ನು ವೇಗವಾಗಿ ಮತ್ತು ಆರಾಮದಾಯಕವಾಗಿ ಮಾಡಲು ಈ ರೈಲು ವಿನ್ಯಾಸಗೊಳಿಸಲಾಗಿದೆ.
ಅಮೃತ್ ಭಾರತ್ ಎಕ್ಸ್‌ಪ್ರೆಸ್
ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಲಾದ ರೈಲು. ಕಡಿಮೆ ವೆಚ್ಚದಲ್ಲಿ ವೇಗದ ಮತ್ತು ಸುರಕ್ಷಿತ ಪ್ರಯಾಣ ಒದಗಿಸುವುದು ಇದರ ಉದ್ದೇಶವಾಗಿದೆ.
ಈ ರೈಲು ‘ಪುಶ್-ಪುಲ್’ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ರೈಲಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎಂಜಿನ್‌ಗಳಿದ್ದು, ಉತ್ತಮ ವೇಗ ಮತ್ತು ಕಾರ್ಯಕ್ಷಮತೆ ಒದಗಿಸುತ್ತದೆ. ಸ್ಲೀಪರ್ ಮತ್ತು ಜನರಲ್ ನಾನ್-ಎಸಿ ಕೋಚ್‌ಗಳನ್ನು ಹೊಂದಿರುವ ಈ ರೈಲಿನಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಕುಶನ್ ಸೀಟುಗಳು, ಸೀಲ್ಡ್ ಗ್ಯಾಂಗ್‌ವೇ, ಸಿಸಿಟಿವಿ ಕ್ಯಾಮೆರಾ ಹಾಗೂ ಆಧುನಿಕ ಸುರಕ್ಷತಾ ವ್ಯವಸ್ಥೆಗಳು ಲಭ್ಯವಿವೆ.
ಯಾವ ರೈಲು ಬೆಸ್ಟ್?
ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಆಯ್ಕೆ ಬದಲಾಗುತ್ತದೆ. ವೇಗ, ಐಷಾರಾಮಿ ಸೌಲಭ್ಯ ಮತ್ತು ಕಡಿಮೆ ಪ್ರಯಾಣ ಸಮಯಕ್ಕೆ ಆದ್ಯತೆ ನೀಡುವವರು ವಂದೇ ಭಾರತ್ ಆಯ್ಕೆ ಮಾಡಬಹುದು. ಆದರೆ ಕಡಿಮೆ ದರದಲ್ಲಿ ದೂರದ ಪ್ರಯಾಣ ಮಾಡಲು ಬಯಸುವವರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ಆಯ್ಕೆ ಮಾಡಬಹುದು.
ವಂದೇ ಭಾರತ್ ಪ್ರೀಮಿಯಂ ಪ್ರಯಾಣಿಕರಿಗಾಗಿ ರೂಪಿತವಾದರೆ, ಅಮೃತ್ ಭಾರತ್ ಸಾಮಾನ್ಯ ಜನರಿಗೆ ಆಧುನಿಕ ಮತ್ತು ಕೈಗೆಟುಕುವ ಪ್ರಯಾಣ ಅನುಭವ ನೀಡುವ ಉದ್ದೇಶದಿಂದ ರೂಪಿಸಲಾಗಿದೆ.
