ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಹರ್ಸಿಲ್ ಸಮೀಪದ ಧರಾಲಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ಮೇಘಸ್ಫೋಟದಿಂದ ಖೀರ್ ಗಂಗಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಒಂದು ಗ್ರಾಮವೇ ಕೊಚ್ಚಿಕೊಂಡು ಹೋಗಿದೆ. ಈ ದುರಂತದಿಂದ ಹಲವರು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಉತ್ತರಕಾಶಿ ಪೊಲೀಸ್ ಇಲಾಖೆಯ ಪ್ರಕಾರ, ಖೀರ್ ಗಂಗಾ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿರುವುದರಿಂದ ಧರಾಲಿ ಪ್ರದೇಶದಲ್ಲಿ ಭಾರೀ ಹಾನಿಯ ವರದಿಗಳು ಬಂದಿವೆ. ಈಗಾಗಲೇ ಪೊಲೀಸರು, ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF), ಭಾರತೀಯ ಸೇನೆ, ಮತ್ತು ಇತರ ರಕ್ಷಣಾ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಮೇಘಸ್ಫೋಟದ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮನೆಗಳು ಪ್ರವಾಹದ ರಭಸಕ್ಕೆ ಕೊಚ್ಚಿಕೊಂಡು ಹೋಗಿರುವ ದೃಶ್ಯಗಳು ಆತಂಕ ಮೂಡಿಸಿವೆ.
ಭಾರತೀಯ ಹವಾಮಾನ ಇಲಾಖೆ (IMD) ಉತ್ತರಾಖಂಡದ ಉತ್ತರಕಾಶಿ, ರುದ್ರಪ್ರಯಾಗ, ಚಮೋಲಿ, ಮತ್ತು ತೆಹ್ರಿ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ. ಈ ಮೇಘಸ್ಫೋಟದಿಂದ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಚಾರ್ ಧಾಮ್ ಯಾತ್ರೆಯನ್ನು 24 ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಮಾನ್ಸೂನ್ ಋತುವಿನಲ್ಲಿ ಉತ್ತರಾಖಂಡದಲ್ಲಿ ಭಾರೀ ಮಳೆಯಿಂದ ತೀವ್ರ ಅವಘಡಗಳು ಸಂಭವಿಸುತ್ತಿವೆ. ಸೋಮವಾರ ಹಲ್ದ್ವಾನಿ ಸಮೀಪದ ಭಾಖ್ರಾ ತೊರೆಯ ರಭಸದಿಂದ ಒಬ್ಬ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದಾರೆ. ಭಾನುವಾರ ಭುಜಿಯಾಘಾಟ್ ಸಮೀಪದ ಒಂದು ಉಬ್ಬಿಕೊಂಡ ತೊರೆಯಲ್ಲಿ ಇಬ್ಬರು ಮುಳುಗಿಹೋಗಿದ್ದಾರೆ. ಇದೇ ರೀತಿ, ರುದ್ರಪ್ರಯಾಗದಲ್ಲಿ ರಾತ್ರಿಯಿಡೀ ಭೂಕುಸಿತದಿಂದ ಬೆಟ್ಟದಿಂದ ಬಿದ್ದ ಕಲ್ಲುಗಳು ಮತ್ತು ಭಗ್ನಾವಶೇಷಗಳಿಂದ ಎರಡು ಅಂಗಡಿಗಳು ಧ್ವಂಸಗೊಂಡಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರ ತಿಳಿಸಿದೆ.
ರಕ್ಷಣಾ ಕಾರ್ಯಾಚರಣೆಗಳು ತೀವ್ರಗತಿಯಲ್ಲಿ ನಡೆಯುತ್ತಿದ್ದು, ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಆಹಾರ, ಔಷಧ, ಮತ್ತು ತಾತ್ಕಾಲಿಕ ಆಶ್ರಯವನ್ನು ಒದಗಿಸುವ ಕಾರ್ಯದಲ್ಲಿ ತೊಡಗಿದೆ. ಪ್ರಾಣಹಾನಿಯ ಬಗ್ಗೆ ಇನ್ನೂ ದೃಢಪಡಿಲಿಲ್ಲ, ಆದರೆ ಆಸ್ತಿಪಾಸ್ತಿಗೆ ಭಾರೀ ಹಾನಿಯಾಗಿದೆ ಎಂದು ವರದಿಗಳು ಸೂಚಿಸಿವೆ.
