ಜೈಪುರ/ನವದೆಹಲಿ, ನವೆಂಬರ್ 19, 2025: ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ಖಾಂದಾರ್ ತಾಲೂಕಿನ ಸೇವಿ ಖುರ್ದ್ ಸರ್ಕಾರಿ ಶಾಲೆಯ ಶಿಕ್ಷಕ ಹರಿರಾಮ್ ಬೈರ್ವಾ ಅಲಿಯಾಸ್ ಹರಿಓಂ ಬೈರ್ವಾ (34) ಅವರು ಬುಧವಾರ ಬೆಳಗ್ಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SSR) ಕೆಲಸದ ಒತ್ತಡದಿಂದ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ತಹಶೀಲ್ದಾರ್ ಅವರಿಂದ ದೂರವಾಣಿ ಕರೆ ಬಂದ ತಕ್ಷಣವೇ ಅವರು ಕುಸಿದು ಬಿದ್ದಿದ್ದಾರೆ ಎಂದು ಕುಟುಂಬದವರು ಆರೋಪಿಸಸಿದ್ದಾರೆ.
ಹರಿರಾಮ್ ಅವರು ಬೂತ್ ಮಟ್ಟದ ಅಧಿಕಾರಿ (BLO) ಆಗಿ ನೇಮಕಗೊಂಡಿದ್ದು, ಮತದಾರರ ಪಟ್ಟಿ ಸಂಗ್ರಹಣೆ, ದಾಖಲೆ ಪರಿಶೀಲನೆ ಮತ್ತು ಆನ್‌ಲೈನ್ ಎಂಟ್ರಿ ಕೆಲಸದಲ್ಲಿ ತೊಡಗಿದ್ದರು. ಕುಟುಂಬದ ಸದಸ್ಯರು ಮತ್ತು ಸಹೋದ್ಯೋಗಿಗಳ ಪ್ರಕಾರ, ಕಳೆದ ಹಲವು ದಿನಗಳಿಂದ ತಹಶೀಲ್ದಾರ್ ಮತ್ತು ಇತರ ಉನ್ನತ ಅಧಿಕಾರಿಗಳು ದಿನಕ್ಕೆ 100-150 ಮನೆ ಭೇಟಿ, ಎಲ್ಲ ದಾಖಲೆಗಳನ್ನು ತಕ್ಷಣ ಒಳಗೊಡಿಸಿ ಎಂದು ನಿರಂತರ ಒತ್ತಡ ಹೇರಿದ್ದರು. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತಹಶೀಲ್ದಾರ್ ದೂರವಾಣಿ ಕರೆ ಮಾಡಿ ಇಂದು ಸಂಜೆಯೊಳಗೆ ಎಲ್ಲ ಕೆಲಸ ಮುಗಿಸಬೇಕು, ಇಲ್ಲದಿದ್ದರೆ ಕ್ರಮ ಕೈಗೊಳ್ಳಾಲಾಗುತ್ತದೆ ಎಂದು ಬೆದರಿಕೆ ಹಾಕಿದ ನಂತರ ಹರಿರಾಮ್ ಅವರು ಎದೆ ನೋವು ಬಂದು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಅವರನ್ನು ತಕ್ಷಣ ಸವಾಯಿ ಮಾಧೋಪುರ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ವೈದ್ಯರು ಬಂದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪೋಸ್ಟ್‌ಮಾರ್ಟಂ ವರದಿಯಲ್ಲಿ ತೀವ್ರ ಹೃದಯಾಘಾತ ಎಂದು ದೃಢಪಡಿಸಲಾಗಿದೆ.
ಕುಟುಂಬಿಕರು ಮತ್ತು ಗ್ರಾಮಸ್ಥರು ತಹಶೀಲ್ದಾರ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಆರೋಗ್ಯವಾಗಿದ್ದರು. ಆದರೆ ದಿನರಾತ್ರಿ ಒತ್ತಡದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ಹೇಳಿದ್ದಾರೆ. ಶಿಕ್ಷಕ ಸಂಘಟನೆಗಳು ಸಹ ಈ ಘಟನೆಯನ್ನು ಖಂಡಿಸಿ, ಶಿಕ್ಷಕರ ಮೇಲೆ ಚುನಾವಣಾ ಕರ್ತವ್ಯದ ಹೆಸರಿನಲ್ಲಿ ಮಾನವೀಯತೆಯಿಲ್ಲದ ಒತ್ತಡ ಹೇರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ತಹಶೀಲ್ದಾರ್ ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ನಾನು ಕೇವಲ ಉನ್ನತ ಅಧಿಕಾರಿಗಳ ಸೂಚನೆಯಂತೆ ಕರೆ ಮಾಡಿದ್ದೆ. ಯಾವುದೇ ಬೆದರಿಕೆ ಹಾಕಲಿಲ್ಲ. ಶಿಕ್ಷಕರ ಆರೋಗ್ಯದ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಖಾಂದಾರ್ ಪೊಲೀಸ್ ಠಾಣೆಯಲ್ಲಿ ಇದುವರೆಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಈ ತಿಂಗಳು ಮಾತ್ರವಲ್ಲ, ಕೇವಲ ನವೆಂಬರ್ ತಿಂಗಳಲ್ಲೇ ದೇಶಾದ್ಯಂತ SSR ಕೆಲಸದ ಒತ್ತಡದಿಂದ ಮೃತಪಟ್ಟ ನಾಲ್ಕನೇ ಬಿಎಲ್‌ಒ ಎಂಬುದು ಗಮನಾರ್ಹ. ಇದಕ್ಕೂ ಮುಂಚೆ ಉತ್ತರ ಪ್ರದೇಶದಲ್ಲಿ ಒಬ್ಬ ಬಿಎಲ್‌ಒ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಮಧ್ಯಪ್ರದೇಶದಲ್ಲಿ ಇಬ್ಬರು ಶಿಕ್ಷಕರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಶಿಕ್ಷಕ ಸಂಘಟನೆಗಳು ಈಗ ದೇಶಾದ್ಯಂತ ಪ್ರತಿಭಟನೆ ಘೋಷಿಸಿದ್ದು, ಬಿಎಲ್‌ಒ ಕರ್ತವ್ಯಕ್ಕೆ ಪ್ರತ್ಯೇಕ ಸಿಬ್ಬಂದಿ ನೇಮಿಸಿ, ಶಿಕ್ಷಕರ ಮೇಲಿನ ಒತ್ತಡ ಕಡಿಮೆ ಮಾಡಿ ಎಂದು ಆಗ್ರಹಿಸಿವೆ. ಚುನಾವಣಾ ಆಯೋಗಕ್ಕೂ ಈ ಬಗ್ಗೆ ದೂರು ಸಲ್ಲಿಸುವ ತಯಾರಿ ನಡೆಯುತ್ತಿದೆ.
