ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಚಕ್ರತ ಪ್ರದೇಶದ ಬುಡಕಟ್ಟು ಗ್ರಾಮವಾದ ಕಂದಾರ್‌ನಲ್ಲಿ ಸ್ಥಳೀಯ ಪಂಚಾಯತ್ ಒಂದು ವಿಚಿತ್ರ ನಿರ್ಣಯವನ್ನು ಕೈಗೊಂಡಿದೆ. ಮಹಿಳೆಯರು ಮದುವೆ ಮತ್ತು ಇತರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮೂರಕ್ಕಿಂತ ಹೆಚ್ಚು ಚಿನ್ನದ ಆಭರಣಗಳನ್ನು ಧರಿಸಿದರೆ 50,000 ರೂಪಾಯಿಗಳ ದಂಡ ವಿಧಿಸುವ ನಿಯಮವನ್ನು ಜಾರಿಗೆ ತರಲಾಗಿದೆ.
ಮಹಿಳೆಯರು ಕೇವಲ ಮಂಗಳಸೂತ್ರ, ಮೂಗುತಿ, ಮತ್ತು ಕಿವಿಯೋಲೆಗಳನ್ನು ಮಾತ್ರ ಧರಿಸಬಹುದು. ಈ ಆದೇಶವನ್ನು ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿದೆ, ಇದು ಗ್ರಾಮದ ಬಡತನದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಆರ್ಥಿಕ ಹೊರೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಕಂದಾರ್ ಗ್ರಾಮದ 80 ವರ್ಷದ ನಿವಾಸಿ ಉಮಾ ದೇವಿ ಈ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ, ನಮ್ಮ ಗ್ರಾಮದಲ್ಲಿ ಹೆಚ್ಚಿನವರು ಬಡವರಾಗಿದ್ದಾರೆ. ನಾವು ಸರಳ ಜೀವನ ನಡೆಸುತ್ತೇವೆ. ಚಿನ್ನದ ಆಭರಣಗಳ ಬೆಲೆ ಗಗನಕ್ಕೇರಿದೆ, ಇಂತಹ ಸಂದರ್ಭದಲ್ಲಿ ಈ ನಿಯಮವು ಸರಿಯಾದ ಕ್ರಮವಾಗಿದ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ 15-20 ವರ್ಷಗಳಲ್ಲಿ ಕೆಲವು ಕುಟುಂಬಗಳು ಸರ್ಕಾರಿ ಉದ್ಯೋಗಗಳ ಮೂಲಕ ಆರ್ಥಿಕವಾಗಿ ಸುಧಾರಿತವಾಗಿದ್ದು, ಇದರಿಂದ ಗ್ರಾಮದಲ್ಲಿ ದುಬಾರಿ ಚಿನ್ನದ ಆಭರಣಗಳನ್ನು ಧರಿಸುವ ಪ್ರವೃತ್ತಿ ಹೆಚ್ಚಾಗಿದೆ. ಕೆಲವು ಮಹಿಳೆಯರು 180-200 ಗ್ರಾಮ್ ತೂಕದ ಡಿಸೈನರ್ ಚಿನ್ನದ ಸೆಟ್‌ಗಳನ್ನು ಧರಿಸುತ್ತಿದ್ದಾರೆ, ಇದರ ಮೌಲ್ಯ ಪ್ರಸ್ತುತ ಬೆಲೆಯಲ್ಲಿ 22 ಲಕ್ಷದಿಂದ 25 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.
ಗ್ರಾಮದ ಬಡತನದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ದುಬಾರಿ ಆಭರಣಗಳ ಖರೀದಿ ಮತ್ತು ಪ್ರದರ್ಶನವು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಹೊರೆಯಾಗುತ್ತಿದೆ ಎಂದು ಗ್ರಾಮಸ್ಥರು ಭಾವಿಸಿದ್ದಾರೆ. ಈ ನಿಯಮವು ಗ್ರಾಮದ ಜನರಿಗೆ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಗ್ರಾಮದ ಮತ್ತೊಬ್ಬ ನಿವಾಸಿ ತುಲ್ಕಾ ದೇವಿ, ಈ ನಿರ್ಬಂಧವನ್ನು ಬೆಂಬಲಿಸಿ, ಚಿನ್ನದ ಆಭರಣಗಳ ಜೊತೆಗೆ, ಗ್ರಾಮದಲ್ಲಿ ಇಂಗ್ಲಿಷ್ ವಿಸ್ಕಿಯಂತಹ ಬ್ರಾಂಡೆಡ್ ಮದ್ಯದ ಬಳಕೆಯೂ ಹೆಚ್ಚಾಗಿದೆ. ಈಗಾಗಲೇ ಸ್ಥಳೀಯವಾಗಿ ತಯಾರಿಸುವ ಸಣ್ಣ ಪ್ರಮಾಣದ ಪಾನೀಯಗಳಿವೆ, ಆದರೆ ದುಬಾರಿ ಬ್ರಾಂಡೆಡ್ ಮದ್ಯವು ಕುಟುಂಬಗಳಿಗೆ ಆರ್ಥಿಕ ಹೊರೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕು ಎಂದು ಅವರು ಒತ್ತಿಹೇಳಿದ್ದಾರೆ.
ಈ ನಿರ್ಧಾರದ ಹಿಂದಿನ ಪ್ರಮುಖ ವ್ಯಕ್ತಿಯಾದ ತಿಲಕ್ ಸಿಂಗ್, ಈ ಕ್ರಮವನ್ನು ಸಾಮಾಜಿಕ ಸುಧಾರಣೆಯತ್ತ ಮೊದಲ ಹೆಜ್ಜೆ ಎಂದು ಹೇಳಿದ್ದಾರೆ ಇದು ಕೇವಲ ಆರಂಭವಷ್ಟೇ. ಕಾಲಾನಂತರದಲ್ಲಿ ಗ್ರಾಮದಲ್ಲಿ ಇನ್ನಷ್ಟು ಸಾಮಾಜಿಕ ಸುಧಾರಣಾ ಉಪಕ್ರಮಗಳನ್ನು ಪರಿಚಯಿಸಲಾಗುವುದು ಎಂದು ಹೇಳಿದ್ದಾರೆ.
ಈ ವಿಚಿತ್ರ ನಿಯಮವು ದೇಶದಾದ್ಯಂತ ಗಮನ ಸೆಳೆದಿದ್ದು, ಗ್ರಾಮೀಣ ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗೆ ಒಂದು ಉದಾಹರಣೆಯಾಗಬಹುದು. ಕಂದಾರ್ ಗ್ರಾಮದ ಈ ಕ್ರಮವು ಇತರ ಗ್ರಾಮಗಳಿಗೂ ಮಾದರಿಯಾಗಬಹುದೇ ಎಂಬ ಚರ್ಚೆ ಆರಂಭವಾಗಿದೆ.
 
			
 
					




 
                             
                             
                             
                             
                            