ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಫಲಿತಾಂಶವೆಂದರೆ ಅದು ಕೇವಲ ಅಂಕಗಳ ಪಟ್ಟಿಯಲ್ಲ, ಸಾವಿರಾರು ಅಭ್ಯರ್ಥಿಗಳ ಕನಸು. ಆದರೆ, 2025ರ ಫಲಿತಾಂಶದಲ್ಲಿ 301ನೇ ರ್ಯಾಂಕ್ ಪಟ್ಟಿಯ ಸುತ್ತ ನಡೆದಿರುವ ಘಟನೆ ವಿವಾದ ಸೃಷ್ಟಿ ಮಾಡಿದೆ. ಒಂದೇ ಹೆಸರಿನ ಇಬ್ಬರು ಯುವತಿಯರು ನಾನೇ 301ನೇ ರ್ಯಾಂಕ್ ವಿಜೇತೆ ಎಂದು ಕಿತ್ತಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಅಧಿಕೃತ ಮೆರಿಟ್ ಪಟ್ಟಿಯ ಪ್ರಕಾರ, ರೋಲ್ ನಂಬರ್ 0856794 ಹೊಂದಿರುವ ಆಕಾಂಕ್ಷಾ ಸಿಂಗ್ ಎಂಬ ಅಭ್ಯರ್ಥಿ 301ನೇ ರ್ಯಾಂಕ್ ಪಡೆದಿದ್ದಾರೆ. ಆದರೆ, ಉತ್ತರ ಪ್ರದೇಶದ ಗಾಜಿಪುರ ಮೂಲದ ಒಬ್ಬ ಆಕಾಂಕ್ಷಾ ಸಿಂಗ್ ಮತ್ತು ಬಿಹಾರದ ಅರಾ ಮೂಲದ ಮತ್ತೊಬ್ಬ ಆಕಾಂಕ್ಷಾ ಸಿಂಗ್ ಇಬ್ಬರೂ ತಾವೇ ಆ ಅದೃಷ್ಟವಂತೆ ಎಂದು ಹೇಳಿಕೊಂಡಿದ್ದಾರೆ. ವಿಶೇಷವೆಂದರೆ, ಬಿಹಾರದ ಆಕಾಂಕ್ಷಾ ಅವರು ರಣವೀರ್ ಸೇನೆಯ ಮಾಜಿ ಮುಖ್ಯಸ್ಥ ಬ್ರಹೇಶ್ವರ್ ಮುಖಿಯಾ ಅವರ ಮೊಮ್ಮಗಳಾಗಿದ್ದು, ಇವರ ಮನೆಯಲ್ಲಿ ಈಗಾಗಲೇ ವಿಜಯೋತ್ಸವ ಕೂಡ ನಡೆದುಹೋಗಿದೆ.
ಕ್ಯೂಆರ್ ಕೋಡ್ (QR Code) ಬಿಚ್ಚಿಟ್ಟ ಸತ್ಯ
ಇಬ್ಬರ ಪ್ರವೇಶ ಪತ್ರಗಳನ್ನು ಮೇಲ್ನೋಟಕ್ಕೆ ನೋಡಿದಾಗ ರೋಲ್ ನಂಬರ್ ಒಂದೇ ಆಗಿರುವುದು ಕಂಡುಬಂದು ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಯುಪಿಎಸ್‌ಸಿಯಂತಹ ಉನ್ನತ ಸಂಸ್ಥೆಯಲ್ಲಿ ಇಂತಹ ತಪ್ಪು ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು. ಆದರೆ ತಾಂತ್ರಿಕ ತನಿಖೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.
ಗಾಜಿಪುರದ ಆಕಾಂಕ್ಷಾ ಇವರ ಪ್ರವೇಶ ಪತ್ರದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಅದು ಅಧಿಕೃತ ರೋಲ್ ನಂಬರ್ (0856794) ಮತ್ತು ಯುಪಿಎಸ್‌ಸಿ ಡೇಟಾಬೇಸ್‌ಗೆ ನಿಖರವಾಗಿ ಹೊಂದಿಕೆಯಾಗಿದೆ.ಇನ್ನೂ ಬಿಹಾರದ ಆಕಾಂಕ್ಷಾ ಅವರ ದಾಖಲೆಗಳಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಬೇರೆಯದೇ ರೋಲ್ ನಂಬರ್ ಕಾಣಿಸಿಕೊಂಡಿದೆ. ಇದರಿಂದಾಗಿ ಇವರು ದಾಖಲೆಗಳನ್ನು ತಿದ್ದುಪಡಿ (Document Tampering) ಮಾಡಿರುವ ಸಾಧ್ಯತೆ ದಟ್ಟವಾಗಿದೆ.
ಡಿಜಿಟಲ್ ಯುಗದಲ್ಲಿ ಫೋಟೋಶಾಪ್ ಅಥವಾ ಇತರ ತಂತ್ರಜ್ಞಾನ ಬಳಸಿ ಅಧಿಕೃತ ದಾಖಲೆಗಳನ್ನು ನಕಲು ಮಾಡುವುದು ಕಾನೂನುಬಾಹಿರ. ಗಾಜಿಪುರದ ಆಕಾಂಕ್ಷಾ ಸಿಂಗ್ ಈಗಾಗಲೇ ನನ್ನ ಗುರುತನ್ನು ಕಳ್ಳತನ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದೆಡೆ, ಬಿಹಾರದ ಅಭ್ಯರ್ಥಿ ಸದ್ಯಕ್ಕೆ ಯಾವುದೇ ಸ್ಪಷ್ಟನೆ ನೀಡದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಯುಪಿಎಸ್‌ಸಿ ಇಂತಹ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಬಯೋಮೆಟ್ರಿಕ್ ಡೇಟಾ, ಸಂದರ್ಶನದ ವಿಡಿಯೋ ದಾಖಲೆಗಳು ಮತ್ತು ತಂದೆಯ ಹೆಸರಿನ ಆಧಾರದ ಮೇಲೆ ಅಂತಿಮವಾಗಿ ನಕಲಿ ಅಭ್ಯರ್ಥಿಯನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವುದು ಖಚಿತ. ಸದ್ಯಕ್ಕೆ ತಾಂತ್ರಿಕ ಸಾಕ್ಷ್ಯಗಳು ಉತ್ತರ ಪ್ರದೇಶದ ಆಕಾಂಕ್ಷಾ ಪರವಾಗಿದ್ದು, ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.
