ಲಕ್ನೋ (ಜುಲೈ 15): ಉತ್ತರ ಪ್ರದೇಶದ ನೋಯ್ಡಾದ ಮಾಮುರಾ ಗ್ರಾಮದಲ್ಲಿ ನಾಲ್ಕು ಮಹಡಿಗಳ ವಸತಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ಅಗ್ನಿ ಅವಘಡದಲ್ಲಿ ದಟ್ಟ ಹೊಗೆ ಆವರಿಸಿದ್ದು, ಈ ಹೊಗೆಯಿಂದ ಉಸಿಗಟ್ಟಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆ ವಸತಿ ಕಟ್ಟಡದಲ್ಲಿದ್ದ ಸುಮಾರು 50 ಕುಟುಂಬಗಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಕಟ್ಟಡದ ನೆಲಮಹಡಿಯ ಪಾರ್ಕಿಂಗ್ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಕಟ್ಟಡವನ್ನು ಆವರಿಸಿದ್ದು, ದಟ್ಟ ಹೊಗೆಯಿಂದ ಪರಿಸ್ಥಿತಿ ಆತಂಕಕಾರಿಯಾಗಿತ್ತು.
ಇವಿ ಚಾರ್ಜ್ ವೇಳೆ ಬೆಂಕಿ ಹೊತ್ತಿಕೊಂಡಿರುವ ಶಂಕೆ
ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯುತ್ ಚಾಲಿತ ವಾಹನ (ಇವಿ) ಚಾರ್ಜ್ ಮಾಡುತ್ತಿದ್ದ ವೇಳೆ ಸ್ಪಾರ್ಕ್ ಉಂಟಾಗಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪಾರ್ಕಿಂಗ್ ಪ್ರದೇಶದಲ್ಲಿದ್ದ ಇತರ ವಾಹನಗಳಿಗೂ ಬೆಂಕಿ ವ್ಯಾಪಿಸಿದ ಪರಿಣಾಮ ಬೆಂಕಿಯ ತೀವ್ರತೆ ಹೆಚ್ಚಾಗಿ, ದಟ್ಟ ಹೊಗೆ ಮೇಲಿನ ಮಹಡಿಗಳ ವರೆಗೂ ಹರಡಿತು ಎಂದು ತಿಳಿದು ಬಂದಿದೆ. ಇದರಿಂದ ಅನೇಕ ನಿವಾಸಿಗಳು ತಮ್ಮ ಮನೆಗಳಲ್ಲೇ ಸಿಲುಕಿಕೊಂಡಿದ್ದರು.
ಮಾಹಿತಿ ದೊರಕುತ್ತಿದ್ದಂತೆಯೇ ಅಗ್ನಿಶಾಮಕ ದಳ, ಪೊಲೀಸರು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಏಳು ಅಗ್ನಿಶಾಮಕ ವಾಹನಗಳು, ಹೈಡ್ರಾಲಿಕ್ ಪ್ಲಾಟ್‌ಫಾರ್ಮ್ ಹಾಗೂ ವಿಶೇಷ ರಕ್ಷಣಾ ವಾಹನಗಳ ನೆರವಿನಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದು, ಕಟ್ಟಡದಲ್ಲಿದ್ದ ಸುಮಾರು 50 ಕುಟುಂಬಗಳನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು.
ಗೌತಮ್ ಬುದ್ಧ ನಗರ ಜಂಟಿ ಪೊಲೀಸ್ ಆಯುಕ್ತ ರಾಜೀವ್ ನರೈನ್ ಅವರ ಮಾಹಿತಿ ಪ್ರಕಾರ, ಜಿ+4 ಮಾದರಿಯ ಕಟ್ಟಡದ ನೆಲಮಹಡಿಯಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇತ್ತು. ಅಲ್ಲಿಂದಲೇ ದಟ್ಟ ಹೊಗೆ ಮೇಲಿನ ಮಹಡಿಗಳಿಗೆ ಹರಡಿದ ಪರಿಣಾಮ ಇಬ್ಬರು ನಿವಾಸಿಗಳು ಉಸಿರುಗಟ್ಟಿ ಅಸ್ವಸ್ಥರಾಗಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ಗುರುತು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಇವಿ ಚಾರ್ಜಿಂಗ್ ವೇಳೆ ಉಂಟಾದ ಸ್ಪಾರ್ಕ್‌ನಿಂದಲೇ ಬೆಂಕಿ ಆರಂಭವಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಬೆಂಕಿ ಸಮೀಪದಲ್ಲಿದ್ದ ಪೆಟ್ರೋಲ್ ವಾಹನಗಳಿಗೆ ವ್ಯಾಪಿಸಿದ್ದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ ಎನ್ನಲಾಗಿದೆ.
ಘಟನೆ ಸಂಬಂಧ ಫೇಸ್-3 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಟ್ಟಡದ ಮಾಲೀಕ ಹಾಗೂ ಲೀಸ್‌ದಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಗ್ನಿ ಸುರಕ್ಷತಾ ನಿಯಮಗಳ ಉಲ್ಲಂಘನೆ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ
ಇದೇ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ. ಸದ್ಯ ಅಗ್ನಿ ಅವಘಡಕ್ಕೆ ನಿಖರ ಕಾರಣ ಪತ್ತೆಹಚ್ಚಲು ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಸಮಗ್ರ ತನಿಖೆ ನಡೆಸುತ್ತಿದ್ದಾರೆ.
