ಜುಲೈ 23ಕ್ಕೆ ದಳಪತಿ ವಿಜಯ್ ‘ಜನ ನಾಯಗನ್’ ಗ್ರ್ಯಾಂಡ್ ಎಂಟ್ರಿ!

ಎಂಟ್ರಿ

ಚೆನೈ, ಜುಲೈ(15): ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಜನ ನಾಯಗನ್ ಬಿಡುಗಡೆಗೆ ಕೊನೆಗೂ ಅಧಿಕೃತ ದಿನಾಂಕ ಘೋಷಣೆಯಾಗಿದೆ. ನಟ ಹಾಗೂ ತಮಿಳುನಾಡಿನ ರಾಜಕೀಯ ನಾಯಕ ದಳಪತಿ ವಿಜಯ್ ಅಭಿನಯದ ಈ ಸಿನಿಮಾ ಜುಲೈ 23ರಂದು ವಿಶ್ವಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ. ಕಳೆದ ಏಳು ತಿಂಗಳುಗಳಿಂದ ಸೆನ್ಸಾರ್ ಪ್ರಮಾಣಪತ್ರ ಮತ್ತು ಕಾನೂನು ಪ್ರಕ್ರಿಯೆಗಳ ಕಾರಣದಿಂದ ಚಿತ್ರ ಬಿಡುಗಡೆ ಮುಂದೂಡಲ್ಪಟ್ಟಿದ್ದರೂ, ಇದೀಗ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.

ನಟ ವಿಜಯ್ ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಹೊಸ ಪೋಸ್ಟರ್ ಹಂಚಿಕೊಂಡು #JanaNayaganFromJuly23 ಎಂಬ ಹ್ಯಾಶ್‌ಟ್ಯಾಗ್ ಮೂಲಕ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದ್ದಾರೆ. ಈ ಘೋಷಣೆಯೊಂದಿಗೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.

ಚಿತ್ರ ನಿರ್ಮಾಣ ಸಂಸ್ಥೆ KVN Productions ಕೂಡ ಭಾವನಾತ್ಮಕ ಸಂದೇಶದೊಂದಿಗೆ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. “ಬೆಂಕಿಯಿಂದ ಪರೀಕ್ಷಿಸಲ್ಪಟ್ಟಿದೆ, ಕಾಲದಿಂದ ರೂಪುಗೊಂಡಿದೆ, ಇತಿಹಾಸಕ್ಕಾಗಿ ನಿರ್ಮಿಸಲಾಗಿದೆ. ಹೋರಾಟ ಎಷ್ಟು ಕಠಿಣವಾಗಿರುತ್ತದೆಯೋ, ಗೆಲುವು ಅಷ್ಟೇ ಭರ್ಜರಿಯಾಗಿರುತ್ತದೆ” ಎಂದು ಪೋಸ್ಟ್ ಮಾಡುವ ಮೂಲಕ ಚಿತ್ರದ ದೀರ್ಘ ಕಾನೂನು ಹೋರಾಟಕ್ಕೆ ತೆರೆ ಬಿದ್ದಿರುವುದನ್ನು ತಿಳಿಸಿದೆ.

ಮೂಲತಃ ಈ ಸಿನಿಮಾ ಈ ವರ್ಷದ ಪೊಂಗಲ್ ಹಬ್ಬದ ಸಂದರ್ಭದಲ್ಲಿ, ಅಂದರೆ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಯಿಂದ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯಲ್ಲಿ ಉಂಟಾದ ವಿವಾದ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಹಲವು ಸುತ್ತಿನ ವಿಚಾರಣೆಗಳ ಬಳಿಕ ಚಿತ್ರಕ್ಕೆ ‘A’ (Adults Only) ಪ್ರಮಾಣಪತ್ರ ದೊರೆತಿದ್ದು, ಈಗ ಚಿತ್ರ ಬಿಡುಗಡೆಗೆ ಯಾವುದೇ ಅಡೆತಡೆ ಇಲ್ಲ.

ಈ ಚಿತ್ರಕ್ಕೆ ಮತ್ತೊಂದು ವಿಶೇಷತೆ ಎಂದರೆ, ಪೂರ್ಣ ಪ್ರಮಾಣದ ರಾಜಕೀಯ ಪ್ರವೇಶಕ್ಕೂ ಮುನ್ನ ವಿಜಯ್ ನಟಿಸಿರುವ ಕೊನೆಯ ಸಿನಿಮಾ ಎಂಬುದು. ಇದೇ ಕಾರಣಕ್ಕೆ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ನಿರ್ಮಾಣವಾಗಿದೆ.

ಹೆಚ್. ವಿನೋತ್ ನಿರ್ದೇಶಿಸಿರುವ ಈ ಆಕ್ಷನ್-ಡ್ರಾಮಾ ಚಿತ್ರದಲ್ಲಿ ವಿಜಯ್ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಜೊತೆಗೆ ಬಾಬಿ ಡಿಯೋಲ್, ಪ್ರಕಾಶ್ ರಾಜ್, ಪ್ರಿಯಾಮಣಿ, ಗೌತಮ್ ವಾಸುದೇವ್ ಮೆನನ್, ಮಮಿತಾ ಬೈಜು ಮತ್ತು ನರೇನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ನೀಡಿದ್ದಾರೆ.

ಬಿಡುಗಡೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಚಿತ್ರತಂಡ ಈಗ ದೇಶ-ವಿದೇಶಗಳಲ್ಲಿ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದು, ‘ಜನ ನಾಯಗನ್’ 2026ರ ಈ ಚಿತ್ರವನ್ನು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಒಂದು ಐತಿಹಾಸಿಕ ಥಿಯೇಟ್ರಿಕಲ್ ಇವೆಂಟ್ ಮಾಡಲು ನಿರ್ಮಾಪಕರು ಸಜ್ಜಾಗಿದ್ದಾರೆ.

Exit mobile version