ಲಖನೌ: ಕೇವಲ ಹೋಂವರ್ಕ್ (Homework) ಪೂರ್ಣಗೊಳಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಎರಡನೇ ತರಗತಿಯ ಎಳೆಯ ಬಾಲಕನ ಮೇಲೆ ಇಂಗ್ಲಿಷ್ ಶಿಕ್ಷಕನೊಬ್ಬ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ.
ಗೊಂಡಾ ಜಿಲ್ಲೆಯ ಕರ್ನೈಲಗಂಜ್ ಪ್ರದೇಶದ ಎಂಆರ್‌ಜಿ (MRG) ಎಂಬ ಖಾಸಗಿ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿ ಶಿಕ್ಷಕನನ್ನು ಪ್ರಖರ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಶಾಲೆಯಲ್ಲಿ ಇಂಗ್ಲಿಷ್ ವಿಷಯವನ್ನು ಬೋಧಿಸುತ್ತಿದ್ದನು. ಎರಡನೇ ತರಗತಿಯಲ್ಲಿ ಓದುತ್ತಿರುವ ಬಾಲಕ ಇಂಗ್ಲಿಷ್ ಹೋಂವರ್ಕ್ ಮಾಡಿರಲಿಲ್ಲ. ಇದನ್ನೇ ನೆಪವಾಗಿರಿಸಿಕೊಂಡ ಪ್ರಖರ್ ಸಿಂಗ್, ಮಗುವಿನ ಮೇಲೆ ವಿಕೃತಿ ಮೆರೆದಿದ್ದಾನೆ. ಬಾಲಕನ ಕಾಲುಗಳ ಮೇಲೆ ಪದೇ ಪದೆ ಬಲವಾಗಿ ಹೊಡೆದ ಪರಿಣಾಮ, ಕಾಲುಗಳು ಊದಿಕೊಂಡಿದ್ದು ತೀವ್ರ ರಕ್ತಗಾಯಗಳಾಗಿವೆ.
ಶಾಲೆಯಿಂದ ಮನೆಗೆ ಮರಳಿದ ಬಾಲಕ ಕುಂಟುತ್ತಾ ನಡೆಯುತ್ತಿರುವುದನ್ನು ಕಂಡು ತಂದೆ-ತಾಯಿ ಗಾಬರಿಗೊಂಡಿದ್ದಾರೆ. ಮಗುವಿನ ಪ್ಯಾಂಟ್ ಮೇಲಕ್ಕೆತ್ತಿ ನೋಡಿದಾಗ ಪೋಷಕರು ಬೆಚ್ಚಿಬಿದ್ದಿದ್ದಾರೆ. ಮಗುವಿನ ಎರಡು ಕಾಲುಗಳ ಮೇಲೆ ನೂರಾರು ಗಾಯದ ಗುರುತುಗಳಿದ್ದವು. ನೋವಿನಿಂದ ಮಗು ನರಳುತ್ತಿತ್ತು. ತಕ್ಷಣವೇ ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ ಪೋಷಕರು, ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಘಟನೆ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಶಾಲಾ ಪ್ರಾಂಶುಪಾಲರು, ಆರೋಪಿ ಶಿಕ್ಷಕ ಪ್ರಖರ್ ಸಿಂಗ್‌ನನ್ನು ಸೇವೆಯಿಂದ ತಕ್ಷಣವೇ ವಜಾಗೊಳಿಸಿದ್ದಾರೆ. ಇತ್ತ ಪೊಲೀಸರು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕರ್ನೈಲಗಂಜ್ ಸರ್ಕಲ್ ಆಫೀಸರ್ ಅಭಿಷೇಕ್ ದಬಾಚಾ ಅವರ ಪ್ರಕಾರ, ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 115(2), 351(3) ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.





