ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಇರಾನ್-ಅಮೆರಿಕ ಸಂಘರ್ಷವು ಈಗ ಅನಿವಾಸಿ ಭಾರತೀಯರ ಪಾಲಿಗೆ ಮರಣಶಾಸನವಾಗುತ್ತಿದೆ. ಒಮಾನ್‌ನ ಸೊಹಾರ್ ನಗರದ ಕೈಗಾರಿಕಾ ಪ್ರದೇಶದ ಮೇಲೆ ನಡೆದ ಭೀಕರ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ದೃಢಪಡಿಸಿದೆ. ಫೆಬ್ರವರಿ 28ರಂದು ಯುದ್ಧ ಆರಂಭವಾದ ನಂತರ ಪಶ್ಚಿಮ ಏಷ್ಯಾದ ದೇಶದಲ್ಲಿ ಭೂಮಿಯಲ್ಲಿ ಸಂಭವಿಸಿದ ಮೊದಲ ಭಾರತೀಯ ಸಾವು ಇದಾಗಿದೆ.
ದಾಳಿ ನಡೆದದ್ದು ಎಲ್ಲಿ?
ಒಮಾನ್ ರಾಜಧಾನಿ ಮಸ್ಕತ್‌ನಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಸೊಹಾರ್ ನಗರದ ಅಲ್ ಅವಾಹಿ ಕೈಗಾರಿಕಾ ಪ್ರದೇಶವನ್ನು ಗುರಿಯಾಗಿಸಿಕೊಂಡು ಈ ಡ್ರೋನ್ ದಾಳಿ ನಡೆಸಲಾಗಿದೆ. ಯುಎಸ್ ಮತ್ತು ಇಸ್ರೇಲಿ ಪಡೆಗಳು ಇರಾನ್ ವಿರುದ್ಧ ನಡೆಸುತ್ತಿರುವ ಈ ಸಂಘರ್ಷದ ಭಾಗವಾಗಿ ಸೊಹಾರ್ ನಗರದ ಮೇಲೂ ಕ್ಷಿಪಣಿ ಮತ್ತು ಡ್ರೋನ್ ಮಳೆ ಸುರಿಸಲಾಗಿದೆ. ಅಲ್ ಮಿರಾನಿ ಕೋಟೆಯ ಸುತ್ತಮುತ್ತಲಿನ ಪರ್ವತ ಪ್ರದೇಶಗಳಲ್ಲೂ ಸ್ಫೋಟದ ಸದ್ದು ಕೇಳಿಬಂದಿದ್ದು, ಕೈಗಾರಿಕಾ ವಲಯದಲ್ಲಿದ್ದ ಕಾರ್ಮಿಕರು ಈ ದಾಳಿಗೆ ಸಿಲುಕಿದ್ದಾರೆ.
10 ಮಂದಿ ಭಾರತೀಯರಿಗೆ ಗಾಯ
ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಗಲ್ಫ್) ಅಸೀಮ್ ಮಹಾಜನ್ ಅವರು ನೀಡಿರುವ ಮಾಹಿತಿ ಪ್ರಕಾರ, ಈ ದಾಳಿಯಲ್ಲಿ ಒಟ್ಟು 11 ಮಂದಿ ಗಾಯಗೊಂಡಿದ್ದು, ಅವರಲ್ಲಿ 10 ಮಂದಿ ಭಾರತೀಯರಾಗಿದ್ದಾರೆ. ಗಾಯಗೊಂಡವರ ಪೈಕಿ ಐವರನ್ನು ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಗಿದ್ದು, ಉಳಿದ ಐವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಗಾಯಗೊಂಡವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯುದ್ಧದ ಬಿಕ್ಕಟ್ಟು ಶುರುವಾದಾಗಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಸೇರಿದಂತೆ ಹಲವಾರು ಪಶ್ಚಿಮ ಏಷ್ಯಾದ ದೇಶಗಳಲ್ಲಿ ನಡೆದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳಲ್ಲಿ ಇದುವರೆಗೆ ಸುಮಾರು ಮೂರು ಡಜನ್‌ಗೂ ಹೆಚ್ಚು ಭಾರತೀಯರು ಗಾಯಗೊಂಡಿದ್ದಾರೆ. ಆದರೆ, ಇರಾನ್-ಅಮೆರಿಕ ಯುದ್ಧದ ನೇರ ಪರಿಣಾಮವಾಗಿ ಭಾರತೀಯರು ಪ್ರಾಣ ಕಳೆದುಕೊಂಡಿರುವುದು ಈಗ ಆತಂಕಕ್ಕೆ ಕಾರಣವಾಗಿದೆ. ಸಾವನ್ನಪ್ಪಿದವರ ಕುಟುಂಬಗಳಿಗೆ ಸರ್ಕಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಪಾರ್ಥಿವ ಶರೀರಗಳನ್ನು ತಾಯ್ನಾಡಿಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ.
ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ಅಲ್ಲಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಕೇಂದ್ರ ಸರ್ಕಾರ ನಿರಂತರವಾಗಿ ಒಮಾನ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ.





