ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ತ್ಯಜಿಸಿ ಅಣು ನಿಶಸ್ತ್ರೀಕರಣ ಒಪ್ಪಂದಕ್ಕೆ ಬರಲು ಸಮಯ ಮೀರುತ್ತಿದೆ ಎಂದು ಹೇಳಿದ್ದಾರೆ. ಇಲ್ಲದಿದ್ದರೆ ಮುಂದಿನ ದಾಳಿ “ವಿನಾಶಕಾರಿ” ಮತ್ತು “ತುಂಬಾ ಕೆಟ್ಟದ್ದು” ಆಗಲಿದೆ ಎಂದು ಬೆದರಿಕೆ ಹಾಕಿದ್ದಾರೆ.
ಟ್ರಂಪ್ ತಮ್ಮ ‘ಟ್ರೂತ್ ಸೋಷಿಯಲ್’ ಪ್ಲಾಟ್‌ಫಾರ್ಮ್‌ನಲ್ಲಿ ಬುಧವಾರ ಬರೆದ ಪೋಸ್ಟ್‌ನಲ್ಲಿ, “ಇರಾನ್ ಕಡೆಗೆ ಬೃಹತ್ ನೌಕಾಪಡೆ ಸಾಗುತ್ತಿದೆ. ಇದು USS ಅಬ್ರಹಾಂ ಲಿಂಕನ್ ಏರ್‌ಕ್ರಾಫ್ಟ್ ಕ್ಯಾರಿಯರ್ ನೇತೃತ್ವದಲ್ಲಿ ಇದ್ದು, ವೆನಿಜುವೆಲಾ ಕಡೆಗೆ ಕಳುಹಿಸಿದ್ದಕ್ಕಿಂತ ದೊಡ್ಡದಾಗಿದೆ. ಇದು ದೊಡ್ಡ ಶಕ್ತಿ, ಉತ್ಸಾಹ ಮತ್ತು ಉದ್ದೇಶದೊಂದಿಗೆ ವೇಗವಾಗಿ ಚಲಿಸುತ್ತಿದೆ. ಅಗತ್ಯ ಬಿದ್ದರೆ ತ್ವರಿತವಾಗಿ ಹಿಂಸೆಯೊಂದಿಗೆ ತನ್ನ ಗುರಿ ಸಾಧಿಸಲು ಸಿದ್ಧವಾಗಿದೆ” ಎಂದು ಹೇಳಿದ್ದಾರೆ.
ಟ್ರಂಪ್ ಮುಂದುವರೆದು, “ಇರಾನ್ ಬೇಗನೆ ಮಾತುಕತೆಗೆ ಬರಬೇಕು. ನ್ಯೂಕ್ಲಿಯರ್ ವೆಪನ್ಸ್ ಇಲ್ಲದ ಒಳ್ಳೆಯ ಒಪ್ಪಂದ ಮಾಡಿಕೊಳ್ಳಬೇಕು. ಇದು ಎಲ್ಲರಿಗೂ ಒಳ್ಳೆಯದು. ಸಮಯ ಮೀರುತ್ತಿದೆ. ಹಿಂದೆ ಒಪ್ಪಂದ ಮಾಡಿಕೊಳ್ಳಿ ಎಂದಿದ್ದೆ, ಅವರು ಮಾಡಲಿಲ್ಲ. ಆದ್ದರಿಂದ ಆಪರೇಷನ್ ಮಿಡ್‌ನೈಟ್ ಹ್ಯಾಮರ್ ನಡೆಸಿದ್ದೆವು. ಆದರೆ ಮುಂದಿನ ದಾಳಿ ಇದಕ್ಕಿಂತ ಭಯಂಕರವಾಗಿರಲಿದೆ” ಎಂದು ಎಚ್ಚರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಸೇನೆಯ ಸಂಖ್ಯೆ ಹೆಚ್ಚಿಸಲಾಗಿದೆ. USS ಅಬ್ರಹಾಂ ಲಿಂಕನ್ ಕ್ಯಾರಿಯರ್ ಗ್ರೂಪ್ ಮತ್ತು ಇತರ ನೌಕೆಗಳು ಮಧ್ಯಪ್ರಾಚ್ಯದಲ್ಲಿ ಸ್ಥಾನ ಪಡೆದಿವೆ ಎಂದು US ಸೆಂಟ್ರಲ್ ಕಮಾಂಡ್ ದೃಢೀಕರಿಸಿದೆ. ಇದು ಇರಾನ್ ಮೇಲೆ ಸಂಭಾವ್ಯ ದಾಳಿಗೆ ಸಿದ್ಧತೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಇರಾನ್ ರಿಯಾಲ್ ಸಾರ್ವಕಾಲಿಕ ಕನಿಷ್ಠಕ್ಕೆ ಕುಸಿತ :
ಇರಾನ್‌ನ ಕರೆನ್ಸಿ ರಿಯಾಲ್ ಬುಧವಾರ ದಾಖಲೆಯ ಕನಿಷ್ಠ ಮಟ್ಟಕ್ಕೆ ಜಾರಿದೆ. 1 ಅಮೆರಿಕನ್ ಡಾಲರ್‌ಗೆ 1.6 ಮಿಲಿಯನ್ ರಿಯಾಲ್ ತಲುಪಿದೆ (ಮಂಗಳವಾರ 1.5 ಮಿಲಿಯನ್ ಇತ್ತು). ಸ್ಥಳೀಯ ವ್ಯಾಪಾರಿಗಳ ಪ್ರಕಾರ ಇದು ದೇಶದ ಆರ್ಥಿಕ ಸಂಕಷ್ಟ ಮತ್ತು ಅಮೆರಿಕದ ಬೆದರಿಕೆಗಳಿಂದ ಉಂಟಾಗಿದೆ.
ಇರಾನ್ ಸರ್ಕಾರ ಅಮೆರಿಕದ ಬೆದರಿಕೆಗಳನ್ನು ತಿರಸ್ಕರಿಸಿ, ಯಾವುದೇ ದಾಳಿಗೆ ತಕ್ಷಣ ಮತ್ತು ಶಕ್ತಿಯುತ ಪ್ರತಿಕ್ರಿಯೆ ನೀಡಲು ಸಿದ್ಧ ಎಂದು ಹೇಳಿದೆ. ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭಯ ಹೆಚ್ಚಾಗಿದೆ.
