ನವದೆಹಲಿ/ಬೆಂಗಳೂರು, ಏಪ್ರಿಲ್ 12: ಹರ್ಮುಜ್ ಜಲಸಂಧಿಯಲ್ಲಿ ಅಮೆರಿಕ-ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತದಲ್ಲಿ ಮತ್ತೆ ತೈಲ ಮತ್ತು ಎಲ್ಪಿಜಿ ಅಭಾವದ (Oil & LPG Shortage)ಆತಂಕ ಮೂಡಿದೆ. ಈಗಾಗಲೇ ಹಲವಾರು ಹೋಟೆಲ್‌ಗಳು, ಆಟೋಗಳು ಮತ್ತು ಕಾರುಗಳಿಗೆ ಗ್ಯಾಸ್ ಸಿಗದೆ ಸಂಕಷ್ಟ ಸೃಷ್ಟಿಯಾಗಿದೆ.
ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ವಿಫಲವಾದ ಬೆನ್ನಲ್ಲೇ, ಅಮೆರಿಕ ಹರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಸೈನ್ಯ ನಿಯೋಜಿಸಿದೆ. ಇದರಿಂದಾಗಿ ಭಾರತದ ತೈಲ ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಹೋಟೆಲ್, ಆಟೋ, ಕಾರ್ ಚಾಲಕರ ಸಂಕಷ್ಟ
ಕಳೆದ ಕೆಲವು ದಿನಗಳಿಂದಲೇ ದೇಶದ ಅನೇಕ ನಗರಗಳಲ್ಲಿ ಹೋಟೆಲ್‌ಗಳು ಮತ್ತು ಅಡುಗೆ ಅನಿಲ ಪೂರೈಕೆದಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. “ನಮ್ಮ ಹೋಟೆಲ್‌ನಲ್ಲಿ ಸಿಲಿಂಡರ್‌ಗಳು ಖಾಲಿಯಾಗಿವೆ, ಹೊಸ ಪೂರೈಕೆ ಸಿಗುತ್ತಿಲ್ಲ. ಅದೇ ರೀತಿ ಸಿಎನ್ಜಿ ಚಾಲಿತ ಆಟೋ ಮತ್ತು ಕಾರುಗಳ ಚಾಲಕರು ಕೂಡ ಇಂಧನಕ್ಕಾಗಿ ಪರದಾಡುತ್ತಿದ್ದಾರೆ. “ಗ್ಯಾಸ್ ಇಲ್ಲದೆ ವಾಹನ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದ್ದು. ಉಪಾಹಾರಕ್ಕೆ ಹೋದರೂ ಗ್ಯಾಸ್ ಇಲ್ಲ” ಎಂದು ಆಟೋ ಚಾಲಕೊಬ್ಬರು ಬೇಸರ ವ್ಯಕ್ತಪಡಿಸಿದರು.
ಹರ್ಮುಜ್ ಜಲಸಂಧಿ ಮಧ್ಯಪ್ರಾಚ್ಯದಿಂದ ಭಾರತ, ಚೀನಾ, ಜಪಾನ್ ಮತ್ತು ಯುರೋಪಿಗೆ ತೈಲ ಮತ್ತು ಎಲ್ಪಿಜಿ ಸಾಗಣೆಯ ಪ್ರಮುಖ ಮಾರ್ಗವಾಗಿದೆ. ಜಾಗತಿಕ ತೈಲ ಸಾಗಣೆಯ ಸುಮಾರು 20% ಈ ಜಲಸಂಧಿ ಮೂಲಕವೇ ಸಾಗುತ್ತದೆ. ಭಾರತವು ತನ್ನ ತೈಲ ಅಗತ್ಯದ ಸುಮಾರು 85% ರಷ್ಟು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಅರ್ಧದಷ್ಟು ಹರ್ಮುಜ್ ಜಲಸಂಧಿ ಮಾರ್ಗವನ್ನೇ ಅವಲಂಬಿಸಿದೆ. ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಸಂಭವಿಸಿದರೆ ಅಥವಾ ಜಲಸಂಧಿಯನ್ನು ನಿರ್ಬಂಧಿಸಿದರೆ, ಭಾರತದ ತೈಲ ಮತ್ತು ಗ್ಯಾಸ್ ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಬೆಲೆ ಏರಿಕೆಯ ಆತಂಕ
ಹರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಎರಡು ಯುದ್ಧನೌಕೆಗಳು ನಿಯೋಜನೆಗೊಂಡ ಬಳಿಕ ಅಂತಾರಾಷ್ಟ್ರೀಯ ತೈಲ ಬೆಲೆಗಳು ಬ್ಯಾರೆಲ್‌ಗೆ 5-7 ಡಾಲರ್ ಏರಿಕೆಯಾಗಿವೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಏರುವ ಆತಂಕ ಮೂಡಿದೆ. ಜೊತೆಗೆ, ಎಲ್ಪಿಜಿ ಸಿಲಿಂಡರ್ಗಳ ಬೆಲೆಯೂ ಹೆಚ್ಚಾಗಬಹುದು.
ಪಾಕ್ ಸಾರಥ್ಯದ ಸಂಧಾನ ವಿಫಲ
ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ 21 ಗಂಟೆಗಳ ಕಾಲ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲಗೊಂಡಿದೆ. ಇರಾನ್ ಪರಮಾಣು ಶಸ್ತ್ರ ತ್ಯಜಿಸುವುದಾಗಿ ಬರವಣಿಗೆ ನೀಡದ ಕಾರಣ ಅಮೆರಿಕ ನಿಯೋಗ ವಾಪಸಾಗಿದೆ. ವಿಫಲ ಮಾತುಕತೆಯ ಬಳಿಕ ಟ್ರಂಪ್ ಅವರು ಹರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಕಾರ್ಯಾಚರಣೆಗೆ ಸೈನ್ಯ ಕಳುಹಿಸಿದ್ದಾರೆ. ಇರಾನ್ ಕಡೆಯೂ ಪ್ರತಿಕ್ರಿಯಿಸುವ ಸಾಧ್ಯತೆಯಿದೆ.
