ತಿರುಪತಿ: ವಿಶ್ವಪ್ರಸಿದ್ಧ ತಿರುಪತಿ ವೆಂಕಟೇಶ್ವರ ಸ್ವಾಮಿಯ ಲಡ್ಡು ಪ್ರಸಾದದಲ್ಲಿ ಕಲಬೆರಿಕೆ ತುಪ್ಪ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ತನಿಖಾ ದಳ (CBI) ಮಹತ್ವದ ಹೆಜ್ಜೆ ಇಟ್ಟಿದೆ. ದೀರ್ಘಕಾಲದ ತನಿಖೆಯ ನಂತರ ಸಿಬಿಐ ವಿಶೇಷ ತನಿಖಾ ತಂಡವು ನಲ್ಲೂರು ಎಸಿಬಿ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪ ಪಟ್ಟಿಯನ್ನು (Charge Sheet) ಸಲ್ಲಿಸಿದೆ.
36 ಮಂದಿ ಪ್ರಮುಖ ಆರೋಪಿಗಳು
ಸಿಬಿಐ ಸಲ್ಲಿಸಿರುವ ಈ ಚಾರ್ಜ್‌ಶೀಟ್‌ನಲ್ಲಿ ಒಟ್ಟು 36 ಮಂದಿ ಪ್ರಮುಖ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಕೇವಲ ತುಪ್ಪ ಪೂರೈಸಿದ ಡೈರಿ ಮಾಲೀಕರು ಮಾತ್ರವಲ್ಲದೆ, ಅಂದಿನ ತಿರುಮಲ ತಿರುಪತಿ ದೇವಸ್ಥಾನದ (TTD) ಉನ್ನತ ಅಧಿಕಾರಿಗಳು ಮತ್ತು ರಾಜಕೀಯ ಪ್ರಭಾವಿ ವ್ಯಕ್ತಿಗಳ ಹೆಸರುಗಳೂ ಸೇರಿವೆ ಎಂದು ಮೂಲಗಳು ತಿಳಿಸಿವೆ.
15 ತಿಂಗಳು, 12 ರಾಜ್ಯಗಳು: ಬೃಹತ್ ತನಿಖೆ
ಈ ಹಗರಣದ ಆಳವನ್ನು ಅರಿಯಲು ಸಿಬಿಐ ಅಧಿಕಾರಿಗಳು ಬರೋಬ್ಬರಿ 15 ತಿಂಗಳುಗಳ ಕಾಲ ನಿರಂತರ ತನಿಖೆ ನಡೆಸಿದ್ದಾರೆ. ಭಾರತದ 12 ರಾಜ್ಯಗಳಲ್ಲಿ ಹರಡಿದ್ದ ಕಲಬೆರಿಕೆ ಜಾಲವನ್ನು ಭೇದಿಸಲು ತನಿಖಾ ತಂಡವು ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಿದೆ. 2019 ರಿಂದ 2024 ರ ನಡುವೆ ಟಿಟಿಡಿಗೆ ಸುಮಾರು 250 ಕೋಟಿ ರೂಪಾಯಿ ಮೌಲ್ಯದ 68 ಲಕ್ಷ ಕೆಜಿ ನಕಲಿ ತುಪ್ಪ ಸರಬರಾಜಾಗಿತ್ತು ಎಂಬ ಆಘಾತಕಾರಿ ಅಂಶ ಹೊರಬಂದಿದೆ.
ಶುದ್ಧ ತುಪ್ಪದ ಹೆಸರಲ್ಲಿ ಪ್ರಾಣಿ ಕೊಬ್ಬು
ಸಿಬಿಐ ವರದಿಯಲ್ಲಿ ಕಲಬೆರಿಕೆಯ ಬಗ್ಗೆ ಭೀಕರತೆಯನ್ನು ಉಲ್ಲೇಖಿಸಲಾಗಿದೆ. ಶುದ್ಧ ಹಾಲಿನ ತುಪ್ಪದ ಬದಲಿಗೆ ಕಡಿಮೆ ದರದ ಪಾಮ್ ಆಯಿಲ್, ಕರ್ನಲ್ ಆಯಿಲ್ ಮತ್ತು ಅಪಾಯಕಾರಿ ರಾಸಾಯನಿಕ ಮಿಶ್ರಣಗಳನ್ನು ಬಳಸಲಾಗಿತ್ತು. ಅಷ್ಟೇ ಅಲ್ಲದೆ, ಪ್ರಾಣಿಗಳ ಕೊಬ್ಬನ್ನು ಮಿಶ್ರಣ ಮಾಡಿ, ಅದನ್ನು ನೋಡಲು ಶುದ್ಧ ತುಪ್ಪದಂತೆ ಕಾಣುವಂತೆ ಮಾಡುವಲ್ಲಿ ಈ ಜಾಲ ಯಶಸ್ವಿಯಾಗಿತ್ತು. ಆದರೆ CCB ಪೊಲೀಸರು ಇದನ್ನ ಭೇದಿಸಿ ಆರೋಪಿಗಲ ಎಡೆಮುರಿ ಕಟ್ಟಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಭೋಲೆ ಬಾಬಾ ಆರ್ಗಾನಿಕ್ ಡೈರಿ (ನಿರ್ದೇಶಕರು ಪೊಮಿಲ್ ಜೈನ್ ಮತ್ತು ವಿಪಿನ್ ಜೈನ್) ಈ ನಕಲಿ ತುಪ್ಪದ ರಾಕೇಟ್‌ನ ಮುಖ್ಯ ಕೇಂದ್ರ ಎಂದು ತನಿಖೆ ಗುರುತಿಸಿದೆ. ವೈಷ್ಣವಿ ಡೈರಿ (ಸಿಇಒ ಅಪೂರ್ವ ವಿನಾಯಕಾಂತ್ ಚಾವ್ಡಾ), ಎಆರ್ ಡೈರಿ (ಎಂಡಿ ಆರ್ ರಾಜಶೇಖರನ್), ದೆಹಲಿಯ ವ್ಯಾಪಾರಿ ಅಜಯ್ ಕುಮಾರ್ ಸುಗಂಧ್ (ರಾಸಾಯನಿಕ ಸರಬರಾಜುದಾರ), ಮಾಜಿ ಟಿಟಿಡಿ ಅಧಿಕಾರಿಗಳಾದ ಪ್ರಳಯ ಕಾವೇರಿ ಮುರಳಿ ಕೃಷ್ಣ, ಆರ್‌ಎಸ್‌ಎಸ್‌ವಿಆರ್ ಸುಬ್ರಹ್ಮಣ್ಯಂ ಮತ್ತು ಇತರರು ಪ್ರಮುಖ ಆರೋಪಿಗಳು ಎಂದು ತನಿಖೆ ಗುರುತಿಸಿದೆ





