ತೆಲಂಗಾಣದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿಷದ ಇಂಜೆಕ್ಷನ್ ಕೊಟ್ಟು 500 ನಾಯಿಗಳ ಹತ್ಯೆ

Untitled design 2026 01 14T122009.977

ಹೈದರಾಬಾದ್: ತೆಲಂಗಾಣದಲ್ಲಿ ಬೀದಿನಾಯಿಗಳ (Stray Dogs) ಸಾಮೂಹಿಕ ಹತ್ಯೆ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯ ವೇಳೆ ನೀಡಿದ್ದ ಭರವಸೆಯಂತೆ ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಬೀದಿನಾಯಿಗಳಿಗೆ ವಿಷಪ್ರಾಶನ ಮಾಡಿ ಕೊಲ್ಲಲಾಗಿದೆ ಎಂದು ಪ್ರಾಣಿ ಕಲ್ಯಾಣ ಕಾರ್ಯಕರ್ತರು ಆರೋಪಿಸಿದ್ದಾರೆ.

ಕಾಮರೆಡ್ಡಿ ಜಿಲ್ಲೆಯ ಭವಾನಿಪೇಟ್, ಪಲ್ವಂಚ, ಫರೀದ್‌ಪೇಟ್, ವಾಡಿ ಹಾಗೂ ಬಂಡರಾಮೇಶ್ವರಪಲ್ಲಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಈ ಕ್ರೂರ ಕೃತ್ಯಗಳನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ ಎನ್ನಲಾಗಿದೆ. ಪ್ರಾಣಿ ಕಲ್ಯಾಣ ಕಾರ್ಯಕರ್ತ ಅದುಲಪುರಂ ಗೌತಮ್ (35) ಅವರು ಜನವರಿ 12ರಂದು ಈ ಸಂಬಂಧ ಪೊಲೀಸರಿಗೆ ದೂರು ದಾಖಲಿಸಿದ್ದು, ಕಳೆದ ಎರಡು ಮೂರು ದಿನಗಳಲ್ಲಿ ಮಾತ್ರವೇ ಸುಮಾರು 200 ನಾಯಿಗಳನ್ನು ಕೊಲ್ಲಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗೌತಮ್ ಅವರಿಗೆ ಜನವರಿ 12ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಯಿಗಳ ಸಾಮೂಹಿಕ ಹತ್ಯೆಯ ಬಗ್ಗೆ ಮಾಹಿತಿ ಲಭಿಸಿದೆ. ವಿಚಾರ ತಿಳಿದ ಕೂಡಲೇ ಅವರು ಸ್ಥಳಕ್ಕೆ ಧಾವಿಸಿದ್ದು, ಅಲ್ಲಿನ ದೃಶ್ಯಗಳು ಮನಕಲಕುವಂತಿದ್ದವು ಎಂದು ಹೇಳಿದ್ದಾರೆ. ಆಯಾ ಗ್ರಾಮಗಳ ಸರಪಂಚರ ಸೂಚನೆಯ ಮೇರೆಗೆ ಈ ಕೃತ್ಯಗಳನ್ನು ನಡೆಸಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ.

ದೂರುದಾರರ ಪ್ರಕಾರ, ನಾಯಿಗಳಿಗೆ ವಿಷಕಾರಿ ಚುಚ್ಚುಮದ್ದು ನೀಡಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಅವು ಸಾವನ್ನಪ್ಪಿವೆ. ಜನವರಿ 12ರಂದು ಸಂಜೆ 6 ಗಂಟೆ ಸುಮಾರಿಗೆ ತಾವು ಮತ್ತು ತಮ್ಮ ಸ್ನೇಹಿತರು ಭವಾನಿಪೇಟೆ ಗ್ರಾಮಕ್ಕೆ ಭೇಟಿ ನೀಡಿದಾಗ, ದೇವಸ್ಥಾನದ ಸಮೀಪ ಹಲವಾರು ನಾಯಿಗಳ ಶವಗಳನ್ನು ನಿರ್ಲಕ್ಷ್ಯವಾಗಿ ಎಸೆದಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಐವರು ಗ್ರಾಮದ ಸರಪಂಚರು ಹಾಗೂ ಕಿಶೋರ್ ಪಾಂಡೆ ಸೇರಿ ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ನಾಯಿಗಳ ಹತ್ಯೆಯನ್ನು ಕಾರ್ಯಗತಗೊಳಿಸಲು ಕಿಶೋರ್ ಪಾಂಡೆ ಅವರನ್ನು ನೇಮಿಸಲಾಗಿತ್ತು ಎಂಬ ಆರೋಪವೂ ಇದೆ. ಈ ಎಲ್ಲ ಕೃತ್ಯಗಳು ಉದ್ದೇಶಪೂರ್ವಕವಾಗಿಯೂ, ಪೂರ್ವಯೋಜಿತವಾಗಿಯೂ ನಡೆದಿವೆ ಎಂದು ಪ್ರಾಣಿ ಹಕ್ಕು ಕಾರ್ಯಕರ್ತರು ಆರೋಪಿಸಿದ್ದಾರೆ.

ಅದುಲಪುರಂ ಗೌತಮ್ ಅವರು, “ಇದು ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಮಾನವೀಯತೆಯ ಮೇಲಿನ ಭೀಕರ ದಾಳಿ. ಬೀದಿನಾಯಿಗಳ ಸಮಸ್ಯೆಗೆ ಸರ್ಕಾರವೇ ನಿಗದಿತ ನಿಯಮಗಳು ಹಾಗೂ ಪರಿಹಾರ ಮಾರ್ಗಗಳನ್ನು ಸೂಚಿಸಿದೆ. ಅವುಗಳನ್ನು ಅನುಸರಿಸದೇ ನಿರ್ದಯವಾಗಿ ಪ್ರಾಣಿಗಳನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version