ನವದೆಹಲಿ, ಜನವರಿ 14: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ (Elon Musk) ಮನುಷ್ಯರ ಭವಿಷ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಲವು ಬಾರಿ ಹಂಚಿಕೊಂಡಿದ್ದಾರೆ. ಅವರ ಮಾತುಗಳು ಕೆಲವೊಮ್ಮೆ ಆಶಾದಾಯಕವಾಗಿ ಕಾಣುತ್ತವೆ, ಕೆಲವೊಮ್ಮೆ ಎಚ್ಚರಿಕೆ ನೀಡಿದಂತೆ ಭಾಸವಾಗುತ್ತವೆ. ಮುಂದಿನ 10ರಿಂದ 20 ವರ್ಷಗಳಲ್ಲಿ ಮನುಷ್ಯರು ಹಣ ಸಂಪಾದನೆಗಾಗಿ ಕೆಲಸ ಮಾಡಬೇಕಾದ ಅಗತ್ಯವೇ ಇಲ್ಲದ ಪರಿಸ್ಥಿತಿ ಬರಬಹುದು ಎಂದು ಹೇಳಿಕೆ ನೀಡಿದ್ದಾರೆ.
ಎಲಾನ್ ಮಸ್ಕ್ ಹಲವು ವರ್ಷಗಳಿಂದಲೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ರೋಬೋಟಿಕ್ಸ್ ಹಾಗೂ ಆಟೊಮೇಷನ್ ಮಾನವ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ ಎಂದು ಎಚ್ಚರಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಪೀಟರ್ ಡೈಮಾಂಡಿಸ್ ಅವರ Moonshots ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಮಸ್ಕ್, ಭವಿಷ್ಯದಲ್ಲಿ ಯೂನಿವರ್ಸಲ್ ಹೈ ಇನ್ಕಮ್ (Universal High Income) ಎಂಬ ವ್ಯವಸ್ಥೆ ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.
ಯೂನಿವರ್ಸಲ್ ಹೈ ಇನ್ಕಮ್ ಅಂದರೇನು?
ಮಸ್ಕ್ ಹೇಳುವಂತೆ, ಮುಂದಿನ ದಶಕಗಳಲ್ಲಿ ಎಐ ಮತ್ತು ರೋಬೋಟ್‌ಗಳು ಮನುಷ್ಯರ ಬಹುತೇಕ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತವೆ. ಉತ್ಪಾದನೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಆಹಾರ, ವಸತಿ, ಆರೋಗ್ಯ ಸೇವೆ, ಸಾರಿಗೆ ಮುಂತಾದ ಮೂಲಭೂತ ಅಗತ್ಯಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತವೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ಅಥವಾ ವ್ಯವಸ್ಥೆ ಪ್ರತಿಯೊಬ್ಬ ನಾಗರಿಕನಿಗೂ ಕನಿಷ್ಠ ಹಾಗೂ ಗೌರವಯುತ ಆದಾಯವನ್ನು ಒದಗಿಸುತ್ತದೆ. ಅದನ್ನೇ ಯೂನಿವರ್ಸಲ್ ಹೈ ಇನ್ಕಮ್ ಎಂದು ಕರೆಯಲಾಗುತ್ತದೆ.
ರಿಟೈರ್ಮೆಂಟ್‌ಗಾಗಿ ಹಣ ಉಳಿಸುವುದು ವ್ಯರ್ಥ?
“ಮುಂದಿನ ದಿನಗಳಲ್ಲಿ ಜನರು ರಿಟೈರ್ಮೆಂಟ್ ಬಗ್ಗೆ ಚಿಂತಿಸಬೇಕಾಗಿಲ್ಲ. ನಿವೃತ್ತಿಗಾಗಿ ಹಣ ಉಳಿಸುವುದು ಅಪ್ರಸ್ತುತವಾಗಬಹುದು,” ಎಂದು ಮಸ್ಕ್ ಹೇಳಿದ್ದಾರೆ. ಎಐ ಆಧಾರಿತ ವ್ಯವಸ್ಥೆಗಳು ಎಲ್ಲರ ಜೀವನವನ್ನು ಸುಧಾರಿಸುತ್ತವೆ. ಮನುಷ್ಯರು ಬದುಕು ಸಾಗಿಸಲು ಹಣಕ್ಕಾಗಿ ಕೆಲಸ ಮಾಡಬೇಕಾಗಿಲ್ಲ. ಬಯಸಿದರೆ ಮಾತ್ರ ಕೆಲಸ ಮಾಡುತ್ತಾರೆ.
ಮುಂದಿನ ದಿನಗಳಲ್ಲಿ ಕೆಲಸ ಒಂದು ಆಯ್ಕೆಯಾಗಿರುತ್ತದೆ, ಕಡ್ಡಾಯವಲ್ಲ. ಯಾರಿಗಾದರೂ ತೋಟಗಾರಿಕೆ ಇಷ್ಟವಿದ್ದರೆ ತಮ್ಮ ಹೊಲದಲ್ಲಿ ತರಕಾರಿ ಬೆಳೆಸಬಹುದು. ಯಾರಿಗಾದರೂ ಕಲೆ, ಸಂಗೀತ ಅಥವಾ ಸಂಶೋಧನೆ ಇಷ್ಟವಿದ್ದರೆ ಅದರಲ್ಲಿ ತೊಡಗಿಸಿಕೊಳ್ಳಬಹುದು. ಆದರೆ ಬದುಕು ಸಾಗಿಸಲು ಕಚೇರಿಗೆ ಹೋಗಿ ಕೆಲಸ ಮಾಡುವ ಅನಿವಾರ್ಯತೆ ಇರುವುದಿಲ್ಲ ಎಂದಿದ್ದಾರೆ..
“ಸಾವಿರಾರು ಕೋಟಿ ರೋಬೋಗಳು ಮನುಷ್ಯರ ಸೇವೆಗೆ ನಿಂತಿರುತ್ತವೆ. ಮನುಷ್ಯರ ಬುದ್ಧಿವಂತಿಕೆಯನ್ನು ಎಐ ಮೀರಿಸುತ್ತದೆ,” ಎಂದು ಮಸ್ಕ್ ಹೇಳಿದ್ದಾರೆ.
